ಮುಂಬೈ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬ ದಂಡದಿಂದ ತಪ್ಪಿಸಿಕೊಳ್ಳಲು, ಪೊಲೀಸ್ ಪೇದೆಯನ್ನು ತನ್ನ ಕಾರಿನ ಬ್ಯಾನೆಟ್ ನಲ್ಲಿ ಸುಮಾರು 1 ಕಿ.ಮೀ. ವರೆಗೆ ಎಳೆದೊಯ್ದ ಘಟನೆ ಮುಂಬೈನ ಪಶ್ಚಿಮ ಅಂಧೇರಿಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಂಧೇರಿಯ ಆಜಾದ್ ನಗರ ಮೆಟ್ರೋ ನಿಲ್ದಾಣದ ಕೆಳಗೆ ಪೊಲೀಸ್ ಪೇದೆ ವಿಜಯಸಿಂಗ್ ಗುರವ್ (48) ಕರ್ತವ್ಯದಲ್ಲಿದ್ದರು. ಒಂದು ಕಾರು ತಪ್ಪಾದ ಬದಿಯಿಂದ ಪ್ರವೇಶಿಸಿ, ಎಸ್‌ವಿ ರಸ್ತೆಯ ಕಡೆಗೆ ಚಲಿಸಿದೆ.
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾರನ್ನು ನಿಲ್ಲಿಸುವಂತೆ ಪೊಲೀಸ್ ಪೇದೆ ಕಾರು ಚಾಲಕನನ್ನು ತಡೆದಿದ್ದಾರೆ. ಆದರೆ ಕಾರು ನಿಲ್ಲಿಸದ ಚಾಲಕ ವೇಗವಾಗಿ ಚಲಾಯಿಸಿದ್ದಾನೆ. ಈ ವೇಳೆ ಪೊಲೀಸ್ ಪೇದೆ ಕಾರಿನ ಬಾನೆಟ್ ಮೇಲೆ ಹಾರಿದ್ದಾರೆ. ಸುಮಾರು 1 ಕಿ.ಮೀ. ವರೆಗೆ ಪೇದೆಯನ್ನು ಚಾಲಕ ಕಾರಿನ ಬಾನೆಟ್ ನಲ್ಲಿ ಎಳೆದೊಯ್ದಿದ್ದಾನೆ.
ಕಾರು ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 353 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ) ಮತ್ತು 279 (ಅತಿವೇಗದ ಚಾಲನೆ) ನ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ದೂರು ದಾಖಲಾಗಿದೆ.
ಇನ್ನು ಅಲ್ಲಿದ್ದ ಜನರು ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಇದರಲ್ಲಿ ಕಾನ್ಸ್ಟೇಬಲ್ ಕಾರ್ ಬಾನೆಟ್ ಮೇಲೆ ಕುಳಿತಿದ್ದು, ಚಾಲಕ ಎಳೆದೊಯ್ಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.