ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮತ್ತೊಬ್ಬ ರಾಜಕಾರಣಿ ವಿಡಿಯೋ ವಿಚಾರ ಚರ್ಚೆಯಾಗುತ್ತಿದೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಗೆ ಸಂಬಂಧಿಸಿದ ವಿಡಿಯೋ, ಫೋಟೋ, ಸ್ಕ್ರೀನ್ ಶಾಟ್ ಮತ್ತು ಆಡಿಯೋವನ್ನು ಪ್ರಸಾರ ಮತ್ತು ಪ್ರಕಟಣೆ ಮಾಡಲು ಮಾಧ್ಯಮಗಳಿಗೆ ಬೆಂಗಳೂರಿನ ಐದನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮಧ್ಯಂತರ ನಿರ್ಬಂಧ ಆದೇಶ ನೀಡಿದೆ.
ತಮ್ಮ ಮಾನಹಾನಿ ಮಾಡುವಂತಹ ಯಾವುದೇ ಅಶ್ಲೀಲ ಫೋಟೋ, ವಿಡಿಯೋ, ಆಡಿಯೋ ಗಳನ್ನು ಪ್ರಸಾರ ಮಾಡಲು ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ಕಾಂತೇಶ್ ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ನ್ಯಾಯಾಲಯ ಏಪ್ರಿಲ್ 22ರಂದು ಆದೇಶ ನೀಡಿದೆ.
ಮಾಧ್ಯಮಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆ. 3ಕ್ಕೆ ಮುಂದೂಡಲಾಗಿದೆ. ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾಧ್ಯಮಗಳು ನನ್ನ ಘನತೆ, ಗೌರವ, ಮಾನಹಾನಿ ಮಾಡಲು ತಮಗೆ ಸೇರಿದೆ ಎನ್ನಲಾದ ನಕಲಿ ಫೋಟೋ, ವಿಡಿಯೋ, ಆಡಿಯೋ ಪ್ರಸಾರ ಮಾಡಲು ಯತ್ನಿಸುತ್ತಿವೆ. ಒಂದೊಮ್ಮೆ ಅಂತಹ ಆಕ್ಷೇಪಾರ್ಹ ಫೋಟೋ ವಿಡಿಯೋ ಪ್ರಸಾರವಾದಲ್ಲಿ ಮಾನಹಾನಿಯಾಗುತ್ತದೆ. ಮಾಧ್ಯಮಗಳ ವಿರುದ್ಧ ಮಧ್ಯಂತರ ನಿಬಂಧನೆ ಆದೇಶ ಮಾಡಬೇಕು ಎಂದು ಕಾಂತೇಶ್ ಕೋರಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ನಿರ್ಬಂಧ ಆದೇಶ ನೀಡಿದೆ.