ಬೆಂಗಳೂರು: ಹಾಸ್ಟೆಲ್ ನಲ್ಲಿ ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಸೆರೆಹಿಡಿದು ಗಂಡನಿಗೆ ಕಳುಹಿಸುತ್ತಿದ್ದ ನರ್ಸ್ ಅಶ್ವಿನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಅಶ್ವಿನಿ ಹಾಸ್ಟೆಲ್ ನಲ್ಲಿ ಸಹೋದ್ಯೋಗಿಗಳ ಸ್ನಾನದ ದೃಶ್ಯಗಳನ್ನು ಸೆರೆ ಹಿಡಿದು ಮೂರನೇ ಗಂಡ ತಮಿಳುನಾಡಿನ ವೆಲ್ಲೂರು ಮೂಲದ ಪ್ರಭುಗೆ ಕಳುಹಿಸುತ್ತಿದ್ದಳು. ಆತನನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈಗಾಗಲೇ ಎರಡು ಮದುವೆಯಾಗಿ ಡೈವೋರ್ಸ್ ಪಡೆದುಕೊಂಡಿರುವ ಅಶ್ವಿನಿ ಮೂರನೇ ಮದುವೆಯಾಗಲು ಕಾಯುತ್ತಿದ್ದಳು. 2017 ರಲ್ಲಿ ಯಾರಿಗೋ ಕರೆ ಮಾಡಲು ಹೋಗಿ ಪ್ರಭು ಈಕೆಗೆ ಕಾಲ್ ಮಾಡಿದ್ದಾನೆ. ಬಳಿಕ ಇಬ್ಬರ ನಡುವೆ ಗೆಳೆತನವಾಗಿ ಮದುವೆಯಾಗಿದ್ದಾರೆ. ಅಶ್ವಿನಿಗೆ ಇದು ಮೂರನೇ ಮದುವೆಯಾಗಿದ್ದು, ಆಕೆಯ ಬಗ್ಗೆ ತಿಳಿದ ಪ್ರಭು ದೂರವಾಗಲು ಪ್ರಯತ್ನಿಸಿದ್ದಾನೆ.
ಚೆನ್ನೈನ ಪ್ರತಿಷ್ಠಿತ ಹೋಟೆಲ್ ನಲ್ಲಿ ಬಾಣಸಿಗನಾಗಿರುವ ಪ್ರಭು ಅಶ್ವಿನಿಯಿಂದ ದೂರವಾಗಲು ಮುಂದಾಗುತ್ತಿದ್ದಂತೆ ಆತನನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಶ್ವಿನಿ ಪ್ರತಿದಿನ ತನ್ನ ಸ್ನಾನದ ದೃಶ್ಯಗಳನ್ನು ವಿಡಿಯೋ ಮಾಡಿ ವಾಟ್ಸಾಪ್ ನಲ್ಲಿ ಕಳುಹಿಸುತ್ತಿದ್ದಳು. ನಂತರ ಆತನ ಸೂಚನೆಯಂತೆ ಸಹೋದ್ಯೋಗಿಗಳ ಸ್ಥಾನದ ವಿಡಿಯೋಗಳನ್ನು ಕೂಡ ಕಳುಹಿಸಿರುವುದು ಗೊತ್ತಾಗಿದೆ. ಡಿಸೆಂಬರ್ 5 ರಂದು ಸಂಜೆ ನರ್ಸ್ ಒಬ್ಬರು ಸ್ನಾನಕ್ಕೆ ಹೋದಾಗ ಮೊಬೈಲ್ ರೆಕಾರ್ಡ್ ಮೋಡ್ ನಲ್ಲಿ ಇರುವುದು ಕಂಡು ಬಂದು ಪರಿಶೀಲನೆ ನಡೆಸಿದಾಗ ಬೆತ್ತಲೆ ವಿಡಿಯೋ ರೆಕಾರ್ಡ್ ಆಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.