ಬೆಂಗಳೂರು: ಅಶ್ಲೀಲ ವಿಡಿಯೋ ರೀತಿ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಕಿರುಕುಳ ನೀಡುತ್ತಾನೆ. ಕಾಲ್ ಗರ್ಲ್ ಗಳನ್ನು ಮನೆಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಾನೆ ಎಂದು ನೊಂದ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
28 ವರ್ಷದ ಸಂತ್ರಸ್ತೆ ದೂರು ನೀಡಿದ್ದು, ಜೆಪಿ ನಗರ ಏಳನೇ ಹಂತದ ನಿವಾಸಿಗಳಾದ ಮಹಿಳೆಯ ಪತಿ ವಿಘ್ನೇಶ್ವರನ್(36), ಅತ್ತೆ ವಿಜಯಲಕ್ಷ್ಮಿ(60), ಮಾವ ಕಲೈ ಸೆಲ್ವನ್(63), ನಾದಿನಿ ಪ್ರಿಯದರ್ಶಿನಿ(30) ಅವರ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಹಿಳೆಗೆ ಈ ಹಿಂದೆ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ಪತಿಯನ್ನು ತೊರೆದು ಹೈದರಾಬಾದ್ ನಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ಚೆನ್ನೈ ಮೂಲದ ವಿಘ್ನೇಶ್ವರನ್ ಪರಿಚಯವಾಗಿ ಸ್ನೇಹಿತರಾಗಿ ಪ್ರೀತಿಸಿದ್ದರು. ಮಹಿಳೆಯ ಮೊದಲ ಪತಿಯೊಂದಿಗೆ ಚರ್ಚಿಸಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ವಿಘ್ನೇಶ್ವರನ್ ಮುಂದೆ ನಿಂತು ಸಹಾಯ ಮಾಡಿದ್ದ.
ಬಳಿಕ ಇಬ್ಬರ ಕುಟುಂಬದವರ ಒಪ್ಪಿಗೆಯಂತೆ 2018ರಲ್ಲಿ ವಿಘ್ನೇಶ್ವರನ್ ಮತ್ತು ಮಹಿಳೆ ತಿರುಪತಿಯಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಂಡಿದ್ದ. ಮನೆಗೆ ಪೋಷಕರು ಆಗಾಗ ಬಂದು ಹೋಗುತ್ತಿದ್ದರು. ನಂತರ ವಿನಾಕಾರಣ ಜಗಳ ತೆಗೆದು ಕಿರುಕುಳ ನೀಡಲು ಆರಂಭಿಸಿದ್ದರು. ವಿಘ್ನೇಶ್ವರನ್ ಗೆ ಚಾಡಿ ಹೇಳುತ್ತಿದ್ದರು. ಮೊದಲ ಪತಿಯ ವಿಚಾರ ಪ್ರಸ್ತಾಪಿಸಿ ನಿಂದಿಸಿ ಹೀಯಾಳಿಸುತ್ತಿದ್ದರು. ಮಗು ಮತ್ತು ಸಂತ್ರಸ್ತೆಯನ್ನು ಸಾಯಿಸುವುದಾಗಿ ನಾದಿನಿ ಬೆದರಿಕೆ ಹಾಕಿದ್ದಾಳೆ.
ವಿಘ್ನೇಶ್ವರನ್ ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದ. ಮನೆಗೆ ಕಾಲ್ ಗರ್ಲ್ಸ್ ಗಳನ್ನು ಕರೆಸಿಕೊಂಡು ತನ್ನ ಎದುರಲ್ಲೇ ಅಸಭ್ಯವಾಗಿ ವರ್ತಿಸುತ್ತಿದ್ದ. ಜಗಳವಾಡಿ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದಾಗ ಮುಚ್ಚಳಿಕೆ ಬರೆದುಕೊಟ್ಟಿದ್ದ. ಈಗ ಮತ್ತೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಕ್ರಮಕ್ಕೆ ಮನವಿ ಮಾಡಿದ್ದಾರೆ.