
ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ವಿಲಕ್ಷಣ ಪ್ರಕರಣ ಒಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಯುವಕನೊಬ್ಬ ಪಾರ್ಕಿನ ಬೆಂಚಿನ ಮೇಲೆ ಮಲಗಿದ್ದು, ಮಗ್ಗಲು ಬದಲಾಯಿಸಲು ಹೋದಾಗ ಬೆಂಚ್ ನಡುವೆ ತಲೆ ಸಿಲುಕಿಸಿಕೊಂಡಿದ್ದಾನೆ. ನೋವಿನಿಂದ ಆತ ಕಿರುಚುತ್ತಿದ್ದ ವೇಳೆ ಸಮಯಕ್ಕೆ ಸರಿಯಾಗಿ ಬಂದ ಪೊಲೀಸರು ಆತನನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಈ ಯುವಕ ಕತ್ತು ಸಿಕ್ಕಿಸಿಕೊಂಡು ಜೋರಾಗಿ ಕಿರುಚಿಕೊಳ್ಳುತ್ತಿದ್ದಾಗ ಇದನ್ನು ಕೇಳಿಸಿಕೊಂಡವರೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮೊದಲಿಗೆ ಆತನನ್ನು ಸಮಾಧಾನಿಸಿದ್ದಾರೆ. ನಂತರ ನಿಧಾನವಾಗಿ ಆತನ ತಲೆಯನ್ನು ಬೆಂಚ್ ನಡುವಿನಿಂದ ಹೊರ ತೆಗೆದಿದ್ದಾರೆ.
ಅಷ್ಟೇ ಅಲ್ಲ, ಆ ಯುವಕನನ್ನು ತಡರಾತ್ರಿಯಲ್ಲೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ತಪಾಸಣೆ ಮಾಡಿಸಿದ್ದಾರೆ. ಕೇವಲ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ವೈದ್ಯರು ಹೇಳಿದ ಬಳಿಕವಷ್ಟೇ ಯುವಕನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಕಾನ್ಪುರ ಪೊಲೀಸ್ ಕಮೀಷನರೇಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಪೊಲೀಸರ ಸಕಾಲಿಕ ಸ್ಪಂದನೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.