ತುಂಬು ಗರ್ಭಿಣಿಯೊಂದಿಗೆ ಯಾರೂ ಬಂದಿಲ್ಲವೆಂಬ ಕಾರಣಕ್ಕೆ ಆಕೆಯನ್ನು ದಾಖಲಿಸಿಕೊಳ್ಳಲು ತಿರುಪತಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದು, ಇದರ ಪರಿಣಾಮ ಆಕೆ ಆಸ್ಪತ್ರೆ ಮುಂದಿನ ರಸ್ತೆ ಬದಿಯಲ್ಲಿಯೇ ಮಗು ಹೆತ್ತಿರುವ ಘಟನೆ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಿರುಪತಿಯ 100 ಬೆಡ್ ಹೊಂದಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ಮಹಿಳೆ ಬಂದಿದ್ದಾಳೆ. ಆದರೆ ಆಕೆಯೊಂದಿಗೆ ಯಾರೂ ಇರಲಿಲ್ಲವೆಂಬ ಕಾರಣಕ್ಕೆ ತುಂಬು ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ.
ಇದರಿಂದಾಗಿ ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದ ಆಕೆ ಆಸ್ಪತ್ರೆ ಮುಂದಿನ ರಸ್ತೆಯಲ್ಲಿ ನರಳಾಡುತ್ತ ಬಿದ್ದಿದ್ದು, ಈ ವೇಳೆ ದಾರಿಹೋಕ ಅಪರಿಚಿತ ವ್ಯಕ್ತಿ ಸಹಾಯಕ್ಕೆ ಧಾವಿಸಿದ್ದಾನೆ. ಅಲ್ಲದೆ ಕೆಲ ಮಹಿಳೆಯರನ್ನು ಸಹ ಕರೆದಿದ್ದಾನೆ.
ಹೀಗಾಗಿ ಬೆಡ್ ಶೀಟ್ ಒಂದರಲ್ಲಿ ಗರ್ಭಿಣಿಯನ್ನು ಕವರ್ ಮಾಡಿದ ಮಹಿಳೆಯರು ಹೆರಿಗೆಗೆ ನೆರವಾಗಿದ್ದಾರೆ. ಅಲ್ಲದೇ ಆಸ್ಪತ್ರೆ ಸಿಬ್ಬಂದಿ ಅಮಾನವೀಯ ವರ್ತನೆಗೆ ಕಿಡಿ ಕಾರಿದ್ದಾರೆ. ಆ ಬಳಿಕ ತಾಯಿ – ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆಯ ತನಿಖೆಗೆ ಆದೇಶಿಸಲಾಗಿದೆ.