ತಮಿಳಿನ ಪಾರ್ಕಿಂಗ್ ಸಿನಿಮಾ, ನೆರೆಹೊರೆಯವರ ನಡುವೆ ವಾಹನಗಳ ಪಾರ್ಕಿಂಗ್ ವಿಚಾರಕ್ಕೆ ನಡೆಯುವ ಜಗಳವನ್ನು ಥ್ರಿಲ್ಲಿಂಗ್ ರೂಪದಲ್ಲಿ ಕಟ್ಟಿಕೊಟ್ಟಿರುವ ಕಥೆಯನ್ನು ಹೊಂದಿದೆ.
ಇದೇ ರೀತಿ ಹೋಲುವ ಕಥೆಯೊಂದು ರಿಯಲ್ಲಾಗಿ ನಡೆದಿದೆ. ಆಗ್ನೇಯ ದೆಹಲಿಯಲ್ಲಿ ಪಾರ್ಕಿಂಗ್ ವಿವಾದದಿಂದ ತನ್ನ ನೆರೆಮನೆಯವರ ಕಾರಿಗೆ ಬೆಂಕಿ ಹಚ್ಚಲಾಗಿದೆ. ಈ ಆರೋಪದ ಮೇಲೆ 28 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರಾಹುಲ್ ಭಾಸಿನ್‌ನನ್ನು ದೆಹಲಿಯಿಂದ 600 ಕಿಲೋಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಅಮೇಥಿ ಬಳಿ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಭಾಸಿನ್ ಈವೆಂಟ್ ಮ್ಯಾನೇಜ್‌ಮೆಂಟ್ ವ್ಯವಹಾರ ನಡೆಸುತ್ತಿದ್ದಾರೆ ಮತ್ತು ತನ್ನ ಸಹೋದರ ಮತ್ತು ಆತನ ಕುಟುಂಬದೊಂದಿಗೆ ಲಜಪತ್ ನಗರದಲ್ಲಿ ವಾಸಿಸುತ್ತಿದ್ದಾರೆ . ಅವರು ತಮ್ಮ ನೆರೆಹೊರೆಯವರಾದ ‘ಜಶ್ನ್-ಎ-ಅದಾಬ್’ ನ ಸಂಸ್ಥಾಪಕ ರಂಜಿತ್ ಸಿಂಗ್ (48) ಅವರೊಂದಿಗೆ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ವಿವಾದವನ್ನು ಹೊಂದಿದ್ದರು ಎನ್ನಲಾಗಿದೆ. ನವೆಂಬರ್ 29 ರಂದು ರಂಜಿತ್ ಸಿಂಗ್ ತಮ್ಮ ಮನೆಯ ಹೊರಗೆ ನಿಲ್ಲಿಸಿದ್ದ ಮಾರುತಿ ಸುಜುಕಿ ಸಿಯಾಜ್‌ಗೆ ಹಾನಿ ಮಾಡಿದ್ದಾರೆ ಎಂದು ಭಾಸಿನ್ ವಿರುದ್ಧ ದೂರು ದಾಖಲಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಭಾಸಿನ್ ಸಿಯಾಜ್‌ನ ಹಿಂಬದಿಯ ಕನ್ನಡಿಯನ್ನು ತಿರುಗಿಸುವುದು ಮತ್ತು ತನ್ನದೇ ಆದ ಮಹೀಂದ್ರಾ ಥಾರ್ ಅನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಹೋಗುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರಿನ ಅನ್ವಯ ಪೊಲೀಸರು ಥಾರ್ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ನವೆಂಬರ್ 30 ರ ಮಧ್ಯರಾತ್ರಿ ಆರೋಪಿ ಭಾಸಿನ್ ರಂಜಿತ್ ಸಿಂಗ್ ಅವರ ಕಾರಿನ ಬಾನೆಟ್‌ಗೆ ಬೆಂಕಿ ಹಚ್ಚಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಾಸಿನ್ ನನ್ನು ಪತ್ತೆ ಹಚ್ಚಲು ತಂಡವನ್ನು ರಚಿಸಲಾಯಿತು. ತಾಂತ್ರಿಕ ಸಹಾಯ ಮತ್ತು ಪೊಲೀಸರ ಬುದ್ಧಿವಂತಿಕೆಯಿಂದ ತನಿಖಾ ತಂಡವು ಭಾನುವಾರ ಉತ್ತರಪ್ರದೇಶದ ಅಮೇಥಿಯಲ್ಲಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಕಳೆದ ವರ್ಷವೂ ಆತನನ್ನು ಬಂಧಿಸಲಾಗಿತ್ತು. ಆರೋಪಿಗಳು ತಮ್ಮ ಹೋಂಡಾ ಅಮೇಜ್ ಕಾರಿನಲ್ಲಿ ಅಮೇಥಿಗೆ ಪರಾರಿಯಾಗಿದ್ದರು. ಅವರನ್ನು ಮತ್ತೆ ದೆಹಲಿಗೆ ಕರೆತಂದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮತ್ತು ಆತನ ಸ್ನೇಹಿತರು ಆಗಾಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದರು ಎಂದು ರಂಜಿತ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.