
ಫೂಲ್ ಔರ್ ಕಾಂಟೇ ಚಿತ್ರದಂತೆ ರಸ್ತೆಯಲ್ಲಿ ಸ್ಟಂಟ್ ಮಾಡಿ ಪೊಲೀಸರಿಗೇ ಸವಾಲಾಕಿದ ಗೂಂಡಾನ ವಿರುದ್ಧ ಪೊಲೀಸರು ಕೇಸ್ ಹಾಕಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನ ರಸ್ತೆಗಳಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿ ಜುಬೇರ್ ಮೌಲಾನಾ ತನ್ನ ಗ್ಯಾಂಗ್‌ನೊಂದಿಗೆ ಜೀಪ್‌ನಲ್ಲಿ ಸ್ಟಂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜುಬೇರ್ ಮೌಲಾನಾ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 65 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ವರದಿಗಳ ಪ್ರಕಾರ ಶುಕ್ರವಾರ ಗಾಂಧಿನಗರದಲ್ಲಿ ಮತ್ತೊಬ್ಬ ಗೂಂಡಾ ಸನ್ನಿ ಮಲಿಕ್ ನ ಹುಟ್ಟುಹಬ್ಬ ಆಚರಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ನಂತರ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
1 ನಿಮಿಷದ ಕ್ಲಿಪ್ ವಿಡಿಯೋದಲ್ಲಿ ಮೂರು-ನಾಲ್ಕು ವಾಹನಗಳು ರಸ್ತೆಯ ಪಕ್ಕದಲ್ಲಿ ಚಲಿಸುತ್ತಿರುವುದನ್ನ ಕಾಣಬಹುದು. ಅವರಲ್ಲಿ ಮೂರು-ನಾಲ್ಕು ಜನ ತೆರೆದ ಜೀಪಿನಲ್ಲಿ ನಿಂತಿದ್ದಾರೆ. ಇಬ್ಬರು ಬಾನೆಟ್‌ನಲ್ಲಿದ್ದಾರೆ. ಇಬ್ಬರು ವೆಹಿಕಲ್ ನ ಡೋರ್ ನಲ್ಲಿ ನಿಂತಿದ್ದಾರೆ. ಜೀಪ್‌ನ ಪಕ್ಕದಲ್ಲಿಯೇ ಒಂದು SUV ಕಾರು ಚಲಿಸುತ್ತಿದೆ. ಈ ಗ್ಯಾಂಗ್ ರಾತ್ರಿ ಹೊತ್ತು ರಸ್ತೆಯಲ್ಲಿ ಫೂಲ್ ಔರ್ ಕಾಂಟೆ ಚಿತ್ರ ಶೈಲಿಯ ಸಾಹಸವನ್ನು ಮಾಡಿದ್ದು ಪ್ರಕರಣ ದಾಖಲಾಗಿದೆ.
ಕಳೆದ ಆಗಸ್ಟ್‌ನಲ್ಲಿ ಇದೇ ರೀತಿಯ ಕಾರ್ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಆರೋಪಿ ಜುಬೇರ್ ಮೌಲಾನಾನನ್ನು ಬಂಧಿಸಲಾಗಿತ್ತು. ಇದರ ವಿರುದ್ಧ ಪೊಲೀಸರಿಗೆ ಸವಾಲೆಸೆದ ಮೌಲಾನಾ ಶುಕ್ರವಾರ ರಾತ್ರಿ ಉದ್ದೇಶಪೂರ್ವಕವಾಗಿ ಅಪರಾಧವನ್ನು ಪುನರಾವರ್ತಿಸಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ್ದಾನೆ.