ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಗಾದೆ ಮಾತೊಂದಿದೆ. ತಮ್ಮ ಮಕ್ಕಳು ಏನು ಕೇಳುತ್ತಾರೋ ಅವೆಲ್ಲವನ್ನೂ ಕೊಟ್ಟು ಮಕ್ಕಳನ್ನು ಹಾಳು ಮಾಡುವ ಪೋಷಕರು ಅದೆಷ್ಟೋ ಜನರಿದ್ದಾರೆ.
ಇದರಲ್ಲಿ ಸಾಕುಪ್ರಾಣಿ ಮಾಲೀಕರು ಕೂಡ ಹಿಂದೆ ಬಿದ್ದಿಲ್ಲ. ಪ್ರಾಣಿಗಳಿಗೆ ಮಾತು ಬರೋದಿಲ್ಲ, ಅವುಗಳು ಏನೂ ಕೇಳೋದಿಲ್ಲವಾದ್ರೂ ಮಾಲೀಕರೇ ಕೊಟ್ಟುಬಿಡುತ್ತಾರೆ.
ಇತ್ತೀಚೆಗೆ, ಮಲೇಷಿಯಾದ ಉದ್ಯಮಿಯೊಬ್ಬರು ತನ್ನ ಬೆಕ್ಕಿನ ನಾಲ್ಕನೇ ಹುಟ್ಟುಹಬ್ಬಕ್ಕೆ ನೆಕ್ಲೇಸ್ ಅನ್ನು ಖರೀದಿಸಿದ್ದರು. ಅಲ್ಲದೆ ತಮ್ಮ ನಾಯಿಗಾಗಿ ನಿರ್ಮಿಸಿರುವ ಮನೆಯ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಹೌದು, ಈ ದಂಪತಿಗಳು ತಮ್ಮ ಗೋಲ್ಡನ್ ರಿಟ್ರೈವರ್‌ಗಾಗಿ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಿದ್ದಾರೆ. ಮನೆಯೊಳಗೆ, ಸಾಕುಪ್ರಾಣಿಗಳಿಗಾಗಿ ವೈಯಕ್ತಿಕ ಸ್ಥಳ ಮತ್ತು ಟಿವಿ, ಫ್ರಿಡ್ಜ್ ಕೂಡ ಇದೆ.
ಈ ವಿಡಿಯೋವನ್ನು ತಮ್ಮ ಟಿಕ್ ಟಾಕ್ ಖಾತೆಯಲ್ಲಿ ಮಹಿಳೆ ಪೋಸ್ಟ್ ಮಾಡಿದ್ದಾರೆ. ತಮ್ಮ ಮುದ್ದಿನ ನಾಯಿಗಾಗಿ ತಮ್ಮ ಪತಿ ಅವರು ವಾಸಿಸುತ್ತಿರುವಂತಹ ಮನೆಯಂಥದ್ದನ್ನೇ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಶ್ವಾನಕ್ಕೆ ಮನೆಯಲ್ಲಿ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಅಷ್ಟೇ ಅಲ್ಲ ನಾಯಿಗೆಂದೇ ಪ್ರತ್ಯೇಕ ಟಿವಿ, ಬೆಡ್, ಫ್ರಿಡ್ಜ್ ಮತ್ತು ಕ್ರಿಸ್ಮಸ್ ಟ್ರೀ ಕೂಡ ಇದೆ.
ನಾಯಿಗೆಂದೇ ಇರಲಾಗಿರುವ ಫ್ರಿಡ್ಜ್ ನಲ್ಲಿ ಅದರ ಆಹಾರ, ಮತ್ತು ವಸ್ತುಗಳನ್ನು ಇಡಲಾಗುತ್ತದೆ. ಮನೆಯನ್ನು ಎಷ್ಟು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ ಎಂದರೆ ಅದಕ್ಕೆ ಸಾಕಷ್ಟು ಸೂರ್ಯನ ಬೆಳಕು ಮತ್ತು ಗಾಳಿ ಯಥೇಚ್ಚವಾಗಿ ಬರುತ್ತದೆ.
ಸಾಕು ನಾಯಿ ಮೇಲಿನ ಕೊಠಡಿಯಿಂದ ಕೆಳಗೆ ಬರಲು ಮನೆಯೊಳಗೆ ಸ್ಲೈಡ್ ಅನ್ನು ಕೂಡ ಅಳವಡಿಸಲಾಗಿದೆ. ನಾಯಿ ಮನೆ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಾಯಿಯ ಜೀವನಶೈಲಿ ನೋಡಿ ಕೆಲವರು ಅಚ್ಚರಿಪಟ್ಟಿದ್ರೆ, ಇನ್ನೂ ಕೆಲವರು ಅಸೂಯೆಪಟ್ಟಿದ್ದಾರೆ.