ಕೇರಳದಲ್ಲಿ ಯುವಕನೊಬ್ಬ ಬಸ್ ನಿಲ್ದಾಣದಲ್ಲಿ ಕುಳಿತಿರುವಾಗಲೇ ಅಪಘಾತಕ್ಕೀಡಾಗಿದ್ದು, ಸಾವಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಪವಾಡಸದೃಶ್ಯ ರೀತಿಯಲ್ಲಿ ಆತ ಪಾರಾದ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭಾನುವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದ್ದು, ಘಟನೆಯ ಭಯಾನಕ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕೇರಳದ ಕುಮಿಲಿ ಗ್ರಾಮದ ನಿವಾಸಿ ವಿಷ್ಣು, ಇಡುಕ್ಕಿಯ ಕಟ್ಟಪ್ಪನ ಬಸ್ ನಿಲ್ದಾಣದಲ್ಲಿ ಬೆಂಚ್ ಮೇಲೆ ಕುಳಿತು ತನ್ನ ಫೋನ್ ಬ್ರೌಸ್ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ, ಒಂದು ಬಸ್ ಅವನ ಕಡೆಗೆ ನುಗ್ಗಿದ್ದು, ಬಂಪರ್ ಎದೆಯ ಮೇಲೆ ಇರುವಾಗಲೇ ನಿಂತಿದೆ. ಅದೃಷ್ಟವಶಾತ್, ಯಾವುದೇ ಗಂಭೀರ ಹಾನಿ ಉಂಟುಮಾಡುವ ಮೊದಲು ಚಾಲಕ ಬಸ್ ಅನ್ನು ಹಿಮ್ಮುಖವಾಗಿ ಚಲಿಸಿದ್ದಾನೆ.
ವಿಷ್ಣು ಕುಳಿತಿದ್ದ ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿ ಬಸ್ ನಿಲ್ಲಿಸಲು ಯತ್ನಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ್ದು, ಗೇರ್ ದೋಷದಿಂದ ಬಸ್ ಅನಿರೀಕ್ಷಿತವಾಗಿ ಮುಂದೆ ಸಾಗಿತು ಎನ್ನಲಾಗಿದೆ.