
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ರೈಲು ಆಗಮಿಸುತ್ತಿದ್ದಂತೆ ಕಿಕ್ಕಿರಿದ ಪ್ಲಾಟ್‌ಫಾರ್ಮ್ ನಲ್ಲಿ ರೈಲಿಗೆ ಹಸಿರು ನಿಶಾನೆ ತೋರುವಾಗ ಈ ಅವಘಡ ಸಂಭವಿಸಿತು. 61 ವರ್ಷದ ಶಾಸಕಿ ಜನರ ಮಧ್ಯೆ ಸಿಲುಕಿ ಕೆಳಗೆ ಬೀಳ್ತಿದ್ದಂತೆ ತಕ್ಷಣ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ.
ಇಟಾವಾ ನಿಲ್ದಾಣಕ್ಕೆ ಬರುವ ಮೊದಲು ರೈಲು ತುಂಡ್ಲಾದಲ್ಲಿ ನಿಲುಗಡೆಯಾಗಿತ್ತು. ಬಳಿಕ ಇಲ್ಲಿಗೆ ಆಗಮಿಸಿದ ನಂತರ, ಸಮಾಜವಾದಿ ಪಕ್ಷದ ಸಂಸದ ಜಿತೇಂದ್ರ ದೌವ್ಹಾರೆ, ಬಿಜೆಪಿಯ ಮಾಜಿ ಸಂಸದ ರಾಮ್ ಶಂಕರ್ ಮತ್ತು ಹಾಲಿ ಶಾಸಕಿ ಸರಿತಾ ಬದೌರಿಯಾ ಸೇರಿದಂತೆ ವಿವಿಧ ರಾಜಕೀಯ ವ್ಯಕ್ತಿಗಳು ಹಸಿರು ನಿಶಾನೆ ತೋರಲು ಜಮಾಯಿಸಿದಾಗ ವೇದಿಕೆಯಲ್ಲಿ ಗದ್ದಲ ಉಂಟಾಗಿ ಈ ಅವಘಡ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ರೈಲನ್ನು ಸಕಾಲದಲ್ಲಿ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಬದೌರಿಯಾ ಅವರನ್ನು ಪೊಲೀಸರು ಹಳಿಗಳಿಂದ ಕೂಡಲೇ ರಕ್ಷಿಸಿದರು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು.