ಬೆಂಗಳೂರು: ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್ ವೊಂದರ ಕಾವಲುಗಾರನನ್ನು ಪೂರ್ವ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ನೂರ್ ಇಸ್ಲಾಂ ಚೌಧರಿ ಬಂಧಿತ ಆರೋಪಿ. ಆತನಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಗೃಹ ಇಲಾಖೆ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ನೂರ್ ಖಾಸಗಿ ಬ್ಯಾಂಕ್ ವೊಂದರ ಕಾವಲುಗಾರನಾಗಿ ನೇಮಕವಾಗಿದ್ದ. ಪೋರ್ನ್ ವೆಬ್ಸೈಟ್ ಗಳಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಡೌನ್ಲೋಡ್ ಮಾಡಿ ವೀಕ್ಷಿಸುತ್ತಿದ್ದ. ಅಲ್ಲದೇ, ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುತ್ತಿದ್ದ.
ಕೇಂದ್ರ ಗೃಹ ಇಲಾಖೆಯ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್ ಪೊಲೈಟೆಡ್(NCFMEC) ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸುವವರ ಮೇಲೆ ನಿಗಾವಹಿಸಿದೆ. ಇತ್ತೀಚೆಗೆ ನೂರ್ ಈ ರೀತಿ ಅಶ್ಲೀಲ ವಿಡಿಯೋ ವೀಕ್ಷಿಸುವುದನ್ನು ಗಮನಿಸಿದ ಕೇಂದ್ರ ಗೃಹ ಇಲಾಖೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.