ಬೆಂಗಳೂರು: ದೈಹಿಕ ಸಂಬಂಧಕ್ಕೆ ಒಪ್ಪದ ಪರಿಚಿತ ವಿವಾಹಿತೆಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಸಮರ್ ಪರಮಾನಿನಿಕ್(47) ಬಂಧಿತ ಆರೋಪಿ. ಪಶ್ಚಿಮ ಬಂಗಾಳ ಮೂಲದ 21 ವರ್ಷದ ವಿವಾಹಿತ ಮಹಿಳೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಅವೆನ್ಯೂ ರಸ್ತೆಯ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಕಬ್ಬನ್ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸಂತ್ರಸ್ತೆ ಯಲಹಂಕದ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸದಲ್ಲಿದ್ದಳು.
ಗ್ರಾಹಕನಾಗಿ ಆಗಾಗ ಬ್ಯೂಟಿ ಪಾರ್ಲರ್ ಗೆ ಹೋಗುತ್ತಿದ್ದ ಸಮರ್ ಒಂದೇ ರಾಜ್ಯದವರಾಗಿದ್ದರಿಂದ ಯುವತಿಯೊಂದಿಗೆ ಪರಿಚಯವಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು. ಈ ವೇಳೆ ಆಕೆಯ ಗಮನಕ್ಕೆ ಬಾರದೆ ಆರೋಪಿ ಮೊಬೈಲ್ ನಲ್ಲಿ ಸರಸದ ದೃಶ್ಯಗಳನ್ನು ಸೆರೆಹಿಡಿದು ನಂತರ ಹಣಕ್ಕಾಗಿ ಆಮಿಷವೊಡ್ಡಿ ಡ್ಯಾನ್ಸ್ ಬಾರ್ ಗೆ ಸೇರಿಸಿದ್ದ.
ಕೆಲವು ತಿಂಗಳ ಹಿಂದೆ ಅನಾರೋಗ್ಯದ ಕಾರಣ ನೀಡಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಯುವತಿ ಅಲ್ಲಿ ಪೋಷಕರು ತೋರಿಸಿದ ಯುವಕನನ್ನು ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾಳೆ. ಆರು ತಿಂಗಳ ಹಿಂದೆ ಗಂಡನೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದು ಕೊಡಿಗೆಹಳ್ಳಿಯಲ್ಲಿ ನೆಲೆಸಿದ್ದಾಳೆ. ಈ ವಿಚಾರ ತಿಳಿದ ಸಮ್ಮರ್ ಆಕೆಗೆ ಕರೆ ಮಾಡಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಬಲವಂತ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದಾಗ ಆಕೆಯೊಂದಿಗೆ ಈ ಹಿಂದೆ ಕಳೆದ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ನೊಂದ ಮಹಿಳೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.