ಹುಬ್ಬಳ್ಳಿ: ಯುವತಿಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರ ನಗರ ನಿವಾಸಿಯಾಗಿರುವ ಆಟೋಚಾಲಕ ಅನಿಲ್ ರಾಜ ಡೋಂಗರೆ ಬಂಧಿತ ಆರೋಪಿ. ಯುವತಿ ತಾಯಿ ಸರ್ಕಾರಿ ನೌಕರರಾಗಿದ್ದಾರೆ. ಅನಿಲ್ ರಾಜನ ಆಟೋದಲ್ಲಿ ಆಗಾಗ ಅವರು ಡ್ರಾಪ್ ತೆಗೆದುಕೊಳ್ಳುತ್ತಿದ್ದರು. ಜನವರಿ 21 ರಂದು ಯುವತಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ್ದ ಆರೋಪಿ ನಿಮ್ಮ ತಾಯಿ ಅಕ್ಕಿ ಚೀಲ ಕಳುಹಿಸಿದ್ದಾರೆ ಎಂದು ಮನೆಯೊಳಗೆ ನುಗ್ಗಿದ್ದಾನೆ.
ಯುವತಿಗೆ ಚಾಕು ತೋರಿಸಿ ಬಟ್ಟೆ ತೆಗೆಯುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾನೆ. ಯುವತಿಯನ್ನು ಬಲವಂತವಾಗಿ ಬೆತ್ತಲೆ ಮಾಡಿ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಅಲ್ಲದೆ ತಾನು ಹೇಳಿದಂತೆ ಕೇಳದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ 40 ಗ್ರಾಂ ಚಿನ್ನದ ಸರ ಕಸಿದುಕೊಂಡಿದ್ದಾನೆ.
ಈ ವಿಷಯ ಯುವತಿ ತಾಯಿಗೆ ಗೊತ್ತಾದಾಗ 25 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದು, ಇಲ್ಲದಿದ್ದರೆ ಬೆತ್ತಲೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಹಳೆಹುಬ್ಬಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.