ಭಾರತೀಯ ಸೇನೆಗೆ ಅಗ್ನಿವೀರನಾಗಿ ನೇಮಕಗೊಂಡು ಪಂಜಾಬಿನ ಪಠಾಣ್ ಕೋಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕ ರಜೆಯಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದು, ಭಾವನ ಸಾಲ ತೀರಿಸಲು ಹಾಗೂ ತನ್ನ ಖರ್ಚಿಗೆ ಒಂದಷ್ಟು ಹಣ ಮಾಡಿಕೊಳ್ಳಲು ಜ್ಯುವೆಲರಿ ಶಾಪಿಗೆ ಕನ್ನ ಹಾಕಿ ಇದೀಗ ಸಿಕ್ಕಿಬಿದ್ದಿದ್ದಾನೆ.
ಪ್ರಕರಣದ ವಿವರ: ಮೋಹಿತ್ ಸಿಂಗ್ ಬಗೇಲ್ ಎಂಬಾತ ಭಾರತೀಯ ಸೇನೆಗೆ ಅಗ್ನಿವೀರನಾಗಿ ನೇಮಕಗೊಂಡವನಾಗಿದ್ದು ಈತ ರಜೆಯಲ್ಲಿ ಮಧ್ಯಪ್ರದೇಶದ ತನ್ನ ಸಹೋದರಿ ಮನೆಗೆ ಬಂದಾಗ ಜ್ಯುವೆಲರಿ ಶಾಪ್ ಗೆ ಕನ್ನ ಹಾಕಲು ಪ್ಲಾನ್ ಮಾಡಿದ್ದಾನೆ. ಈತನಿಗೆ ಸ್ನೇಹಿತ ಆಕಾಶ್ ರೈ ಸಾಥ್ ನೀಡಿದ್ದು, ಇವರುಗಳು ಆಗಸ್ಟ್ 13ರಂದು ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ 50 ಲಕ್ಷ ರೂಪಾಯಿ ಮೌಲ್ಯದ ನಗ – ನಗದು ದೋಚಿ ಪರಾರಿಯಾಗಿದ್ದರು. ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಈ ಕೃತ್ಯ ಭೋಪಾಲ್ ಪೊಲೀಸರನ್ನು ಬೆಚ್ಚಿ ಬೀಳುವಂತೆ ಮಾಡಿದ್ದು ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿತ್ತು. ಅಲ್ಲದೇ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ದರೋಡೆ ಕೃತ್ಯ ನಡೆಸುವಾಗ ಹೆಲ್ಮೆಟ್ ಧರಿಸಿದ್ದ ಮೋಹಿತ್ ಸಿಂಗ್ ಬಗೇಲ್ ಹಾಗೂ ಆಕಾಶ್ ರೈ ಮುಖ ಚಹರೆ ಬಹಿರಂಗವಾಗಿತ್ತು. ಜೊತೆಗೆ ಮೋಹಿತ್ ಸಿಂಗ್ ಅಗ್ನಿವೀರನಾಗಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವಿಷಯ ತಿಳಿದು ಬಂದ ಬಳಿಕ ಆತನ ಕುರಿತಾದ ಸಂಪೂರ್ಣ ವಿವರ ಕಲೆ ಹಾಕಲಾಗಿತ್ತು.
ಅಂತಿಮವಾಗಿ ಮೋಹಿತ್ ಸಿಂಗ್ ಹಾಗೂ ಆತನ ಸ್ನೇಹಿತ ಆಕಾಶ್ ರೈ ಅವರುಗಳನ್ನು ಬಂಧಿಸಿದ್ದು ದರೋಡೆ ಮಾಡಿದ್ದ ನಗ – ನಗದನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಇವರುಗಳಿಗೆ ಸಹಕಾರ ನೀಡಿದ ಆರೋಪದ ಮೇರೆಗೆ ಆಕಾಶ ರೈ ಸಹೋದರ ವಿಕಾಸ್ ರೈ, ಆಕಾಶ್ ರೈ ಭಾವ ಅಮಿತ್ ರೈ, ಆಕಾಶ್ ರೈ ತಾಯಿ ಗಾಯಿತ್ರಿ ರಾಜ್, ಸ್ನೇಹಿತ ಅಭಯ್ ಮಿಶ್ರಾರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ದರೋಡೆ ಕೃತ್ಯ ನಡೆಸಲು ಆರೋಪಿಗಳಿಗೆ ಅಭಯ್ ಮಿಶ್ರಾ ಪಿಸ್ತೂಲು ಪೂರೈಸಿದ್ದ ಸಂಗತಿ ಬೆಳಕಿಗೆ ಬಂದಿದೆ.