ಒಂದು ವೇಳೆ ನೀವು ನಗರದಲ್ಲಿ ವಾಸಿಸುತ್ತಿದ್ರೆ ಪ್ರಾಣಿಗಳ ಗುಂಪನ್ನು ನೋಡುವುದು ಬಹುತೇಕ ಕಡಿಮೆ. ನೋಡಿದ್ರೂ ಬೀದಿ ನಾಯಿಗಳು, ಜಾನುವಾರುಗಳು ಅಷ್ಟನ್ನೇ ನೋಡಿರುತ್ತೀರಿ. ಆದರೆ ಇತ್ತೀಚೆಗೆ, ಚೀನಾದ ಚೊಂಗ್‌ಜುವೊ ನಗರದಲ್ಲಿ 80ಕ್ಕೂ ಹೆಚ್ಚು ಆಸ್ಟ್ರಿಚ್ ಪಕ್ಷಿಗಳ ಹಿಂಡು ತಡರಾತ್ರಿಯಲ್ಲಿ ಬೀದಿಗಳಲ್ಲಿ ಓಡಿವೆ.
ಹೌದು, ಆಸ್ಟ್ರಿಚ್ ಪಕ್ಷಿಗಳ ಗುಂಪು ಬೀದಿಯಲ್ಲಿ ಓಡುತ್ತಿರುವುದನ್ನು ಕಂಡ ವಾಹನ ಚಾಲಕರು ಒಂದು ಕ್ಷಣ ಗಾಬರಿಯಾಗಿದ್ದಾರೆ. ವರದಿಯ ಪ್ರಕಾರ, ಫಾರ್ಮ್‌ವರ್ಕರ್‌ಗಳು ಆವರಣದ ಗೇಟ್ ಅನ್ನು ಸರಿಯಾಗಿ ಮುಚ್ಚದಿದ್ದರಿಂದ ಪಕ್ಷಿಗಳು ಜನನಿಬಿಡ ನಗರದ ಬೀದಿಗಳಲ್ಲಿ ಓಟಕಿತ್ತಿವೆ.
ದಕ್ಷಿಣ ಚೀನಾದ ಚೊಂಗ್‌ಜುವೊ ನಗರದಲ್ಲಿ ಶನಿವಾರ ಮುಂಜಾನೆ ಹಾರಾಡಲು ಸಾಧ್ಯವಿಲ್ಲದ ಆಸ್ಟ್ರಿಚ್ ಪಕ್ಷಿಗಳು ರಸ್ತೆಗೆ ಇಳಿದಿದ್ದವು. ಈ ಅಸಾಮಾನ್ಯ ದೃಶ್ಯದಿಂದ ಅನೇಕ ಜನರು ದಿಗ್ಭ್ರಮೆಗೊಂಡಿದ್ದರೂ, ಯಾರೂ ಕೂಡ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಪಕ್ಷಿಗಳು ಮತ್ತೆ ಗೂಡು ಸೇರಿವೆ.
ಕಳೆದ ವಾರ, ಕ್ಯಾಲಿಫೋರ್ನಿಯಾದಲ್ಲಿ ಕಡಲ ಸಿಂಹವೊಂದು ಬ್ಯುಸಿ ರಸ್ತೆಯಲ್ಲಿ ಪ್ರತ್ಯಕ್ಷವಾಗಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು.