ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಮೋದಿ ಭೇಟಿ ಮಾಡಿದ್ರು.
ಈ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ, ರಕ್ಷಣೆ ಸೇರಿದಂತೆ ಇತರ ವಿಷಯಗಳ ಕುರಿತು ನಾಯಕರು ಚರ್ಚಿಸಿದ್ದಾರೆ.
ಇದು ಅತ್ಯಂತ ಪ್ರಮುಖ ಭೇಟಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಬಣ್ಣಿಸಿದ್ದಾರೆ.
ಈ ಭೇಟಿ ಉಭಯ ದೇಶಗಳ ನಡುವೆ “ಸ್ನೇಹವನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ. ಜಪಾನ್‌ನಲ್ಲಿ ಆರಂಭವಾದ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತದ ಭಾಗವಾಗಿ ಪ್ರಧಾನಿ ಮೋದಿ ಆಸ್ಟ್ರೇಲಿಯಾಗೆ ಆಗಮಿಸಿದ್ದರು. ಆಸೀಸ್ ಪ್ರಧಾನಿಗಳನ್ನು ಭೇಟಿಯಾದ ವಿಡಿಯೋವನ್ನು ಕೂಡ ಮೋದಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಮಾತುಕತೆಯಿಂದ ಐತಿಹಾಸಿಕ ಸಮುದಾಯ ಕಾರ್ಯಕ್ರಮದವರೆಗೆ, ವ್ಯಾಪಾರ ಮುಖಂಡರನ್ನು ಭೇಟಿ ಮಾಡುವುದರಿಂದ ಹಿಡಿದು ವಿವಿಧ ಹಂತಗಳ ಪ್ರಮುಖರನ್ನು ಭೇಟಿಯಾಗಿದ್ದು ಭಾರತ-ಆಸ್ಟ್ರೇಲಿಯಾ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆʼʼ ಎಂದವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರಧಾನಿ ಆಂಥೋನಿ ಅವರನ್ನು ಭೇಟಿಯಾದ ಕ್ಷಣದ ಫೋಟೋಗಳನ್ನು ಕೂಡ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಂಥೋನಿ ಅಲ್ಬನೀಸ್ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯದ ಭವ್ಯ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನಲ್ಲಿ, ಆಸ್ಟ್ರೇಲಿಯಾದ ಪ್ರಧಾನಿ, ಮೋದಿ ಅವರನ್ನು “ದಿ ಬಾಸ್” ಎಂದು ಕರೆದರು ಮತ್ತು ಅವರ ಜನಪ್ರಿಯತೆಯನ್ನು ಪೌರಾಣಿಕ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್‌ಗೆ ಹೋಲಿಸಿದರು.
“ನಾನು ಕೊನೆಯ ಬಾರಿ ಈ ವೇದಿಕೆಯಲ್ಲಿ ಯಾರನ್ನಾದರೂ ನೋಡಿದ್ದರೆ ಅದು ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರನ್ನು, ಇನ್ಯಾರಿಗೂ ಪ್ರಧಾನಿ ಮೋದಿಗೆ ಸಿಕ್ಕಿದಂತಹ ಅದ್ಭುತ ಸ್ವಾಗತ ಸಿಗಲಿಲ್ಲ. ಪ್ರಧಾನಿ ಮೋದಿ ಅವರು ಬಾಸ್” ಎಂದು ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ಕಳೆದ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ಆರ್ಥಿಕ ಸಹಕಾರ ವ್ಯಾಪಾರ ಒಪ್ಪಂದವನ್ನು (ECTA) ಅಂತಿಮಗೊಳಿಸಿದ್ದವು. ಇದು ಕಳೆದ ಡಿಸೆಂಬರ್‌ನಲ್ಲಿ ಜಾರಿಗೆ ಬಂದಿತು. ಎರಡೂ ದೇಶಗಳು ಈಗ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ ಮಾಡಿಕೊಳ್ಳುತ್ತಿವೆ.