ಸಂತ್ರಸ್ತೆಯ ವಯಸ್ಸು ಕಡಿಮೆ ಎಂಬ ಏಕೈಕ ಕಾರಣಕ್ಕೆ ಅತ್ಯಾಚಾರಿಗೆ ಗಲ್ಲು ಶಿಕ್ಷ ವಿಧಿಸುವುದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕಳೆದ 40 ವರ್ಷಗಳಲ್ಲಿ ನೀಡಲಾದ 67 ಅತ್ಯಾಚಾರ ಪ್ರಕರಣಗಳ ತೀರ್ಪುಗಳನ್ನು ಆಧರಿಸಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ಹೊರಹಾಕಿದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದು ಬಳಿಕ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಜೈಲು ಪಾಲಾಗಿದ್ದ ಈರಪ್ಪ ಸಿದ್ದಪ್ಪ ಎಂಬಾತನಿಗೆ ಕರ್ನಾಟಕ ಹೈಕೋರ್ಟ್ 2017ರ ಮಾರ್ಚ್ 6ರಂದು ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು.
2010ರಲ್ಲಿ ಖಾನಾಪುರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಬಳಿಕ ಆಕೆಯ ಶವವನ್ನು ಚೀಲದಲ್ಲಿ ತುಂಬಿ ಬೆಣ್ಣಿಹಾಳ ನದಿಗೆ ಎಸೆಯಲಾಗಿತ್ತು.
ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಸಂಜೀವ್ ಖನ್ನಾ ಹಾಗೂ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠವು ಈರಪ್ಪ ಸಿದ್ದಪ್ಪ ಅತ್ಯಾಚಾರ, ಕೊಲೆ ನಡೆಸಿದ್ದು ಮಾತ್ರವಲ್ಲದೇ ಸಾಕ್ಷ್ಯನಾಶಕ್ಕೆ ಯತ್ನಿಸಿದ್ದನ್ನು ದೃಢಪಡಿಸಿದೆ. ಆದರೆ ಈತನಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ರದ್ದು ಮಾಡಿ 30 ವರ್ಷಗಳವರೆಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಕರ್ನಾಟಕ ಹೈಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಯ ಆದೇಶವನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಿಸಲು ನಾವು ಸಾಕಷ್ಟು ಅಂಶಗಳನ್ನು ಗಮನಿಸಿದ್ದೇವೆ. ಅಪರಾಧಿ ಈರಪ್ಪ ಸಿದ್ದಪ್ಪ 30 ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಬೇಕು. ಸೆಕ್ಷನ್ 302ರ ಅಡಿಯಲ್ಲಿ ಈ ಅಪರಾಧದ ಅಡಿಯಲ್ಲಿ ಅಪರಾಧಿಗೆ ಯಾವುದೇ ಕಾರಣಕ್ಕೂ ಅವಧಿಗೂ ಮುನ್ನ ಬಿಡುಗಡೆ ಅವಕಾಶ ಇರುವುದಿಲ್ಲ. ಕನಿಷ್ಟ ಮೂವತ್ತು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಲೇಬೇಕು ಎಂದು ಹೇಳಿದೆ.