ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಎಲ್ಲಾ ಏರ್ಪಾಡು ನಡೆದಿದೆ. ಅಭಿಮಾನಿಗಳು ಕೂಡ ಈ ಜೋಡಿಯ ಮದುವೆಗೆ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಚೌತ್ ಕಾ ಬರ್ವಾರಾದಲ್ಲಿ ಮದುವೆ ಮಹೋತ್ಸವ ನಡೆಯಲಿದ್ದು, ಎಲ್ಲರ ಚಿತ್ತ ಕತ್ರೀನಾ-ವಿಕ್ಕಿಯತ್ತ ನೆಟ್ಟಿದೆ.
ಡಿಸೆಂಬರ್ 7ರಿಂದ 10 ರ ವರೆಗೆ ನಡೆಯಲಿರುವ ವಿವಾಹ ಕಾರ್ಯಕ್ರಮಗಳಿಗೆ ಬಾಲಿವುಡ್ ಚಿತ್ರರಂಗದ ಪ್ರಮುಖರು ಸೇರಿದಂತೆ 120 ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ. ವಿವಾಹ ಸಮಾರಂಭವು ತೀರಾ ಖಾಸಗಿಯಾಗಿದ್ದು, ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಬಾಲಿವುಡ್ ಸೆಲಬ್ರೆಟಿಗಳಿಗೆಂದೇ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಿಸೆಂಬರ್ 7ರಂದು ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಮರುದಿನ ಮೆಹಂದಿ ಶಾಸ್ತ್ರ ನಡೆಯಲಿದೆ ಎಂದು ಹೇಳಲಾಗಿದೆ. ರಾಜಮನೆತನದ ಮಂಟಪದಲ್ಲಿ ವಿವಾಹವಾಗಲಿರುವ ಈ ಜೋಡಿಯ ಮದುವೆಗೆ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಏಳು ಆಯ್ದ ಬಿಳಿ ಕುದುರೆಗಳ ರಥದಲ್ಲಿ ವಿಕ್ಕಿ ರಾಯಲ್ ಎಂಟ್ರಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಇದೀಗ ಅಭಿಮಾನಿಗಳು ಹಳೆ ವಿಡಿಯೋವನ್ನು ಮೆಲುಕು ಹಾಕುತ್ತಿದ್ದಾರೆ. ಇದು ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದ ವಿಡಿಯೋ ಎಂದು ಹೇಳಲಾಗುತ್ತಿದೆ. ಅಂದು ಈ ಜೋಡಿ ನಡೆಸಿದ್ದ ಮಾತುಕತೆ ಇದೀಗ ವೈರಲ್ ಆಗುತ್ತಿದೆ. ಇದು 2019ರ ಸಂದರ್ಶನ ಎಂದು ಹೇಳಲಾಗಿದ್ದು, ಪರಸ್ಪರರು ಬಹಳ ತಮಾಷೆಯಾಗಿ ಸಂವಹನ ನಡೆಸಿದ್ದರು.
ಇನ್ನು ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.