ನವದೆಹಲಿ: ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೊರೋನಾ ಸೋಂಕು ತಗುಲಿದೆ. ಅವರಿಗೆ ಭಾನುವಾರ ಕೊರೊನಾ ವೈರಸ್ ಪಾಸಿಟಿವ್ ಪರೀಕ್ಷೆ ವರದಿ ಬಂದಿದೆ. ಈಗ ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿಯವರು ತಮ್ಮ ಸಂಪರ್ಕಕ್ಕೆ ಬರುವ ಯಾರಾದರೂ ತಮ್ಮನ್ನು ಪ್ರತ್ಯೇಕಿಸಿ ಪರೀಕ್ಷೆಗೆ ಒಳಪಡಿಸುವಂತೆ ಸಲಹೆ ನೀಡಿದ್ದಾರೆ.
ಹೈದರಾಬಾದ್‌ನಲ್ಲಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಇಂದು ಕೋವಿಡ್ ಪಾಸಿಟಿವ್ ಪರೀಕ್ಷೆ ವರದಿ ಬಂದಿದೆ. ಅವರು ಒಂದು ವಾರ ಸ್ವಯಂ ಪ್ರತ್ಯೇಕತೆಯಲ್ಲಿರಲು ನಿರ್ಧರಿಸಿದ್ದಾರೆ. ಅವರೊಂದಿಗೆ ಸಂಪರ್ಕಕ್ಕೆ ಬಂದವರು ತಮ್ಮನ್ನು ಪ್ರತ್ಯೇಕಿಸಲು ಮತ್ತು ಪರೀಕ್ಷಿಸಲು ತಿಳಿಸಿದ್ದಾರೆ ಎಂದು ಉಪರಾಷ್ಟ್ರಪತಿಗಳ ಕಚೇರಿಯಿಂದ ಮಾಹಿತಿ ನೀಡಲಾಗಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.