ಮಹಾಮಾರಿಯಿಂದಾಗಿ ಕೋಮಾಕ್ಕೆ ಹೋಗಿದ್ದ ಮಹಿಳೆಯೊಬ್ಬರ ಪ್ರಾಣವನ್ನು ವಯಾಗ್ರ ಉಳಿಸಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಕೊರೊನಾದಿಂದಾಗಿ ಮಹಿಳಾ ನರ್ಸ್ ಒಬ್ಬರು ಕೋಮಾಕ್ಕೆ ಹೋಗಿದ್ದರು. ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿದ್ದ ಈ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿತ್ತು. ವೈರಸ್ ನಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿತ್ತು. ಉಸಿರಾಟದ ಸಮಸ್ಯೆ ತೀವ್ರವಾಗಿ, ರಕ್ತ ವಾಂತಿ ಕೂಡ ಆಗುತ್ತಿತ್ತು. ಈ ಲಕ್ಷಣಗಳು ಹೆಚ್ಚಾಗುತ್ತಿದ್ದಂತೆ ಅವರು ಕೋಮಾಕ್ಕೆ ಜಾರಿದ್ದರು.
ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಕಷ್ಟಪಡುತ್ತಿದ್ದರು. ಕೋಮಾಕ್ಕೆ ಜಾರುತ್ತಿದ್ದಂತೆ ಬದುಕುವ ಲಕ್ಷಣಗಳು ಇಲ್ಲ ಎಂದು ವೈದ್ಯರು ಕೈ ಚೆಲ್ಲಿದ್ದರು. ಆನಂತರ ಅವರಿಗೆ ವಯಾಗ್ರ ಚಿಕಿತ್ಸೆ ನೀಡಲಾಗಿತ್ತು. ಆಗ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತ ಸಾಗಿದೆ. ಬರೋಬ್ಬರಿ 45 ದಿನಗಳ ನಂತರ ಕೋಮಾದಿಂದ ಹೊರಗೆ ಬಂದಿದ್ದಾರೆ. ಸದ್ಯ ಉಸಿರಾಟದಲ್ಲಿಯೂ ಸುಧಾರಣ ಕಂಡು ಬಂದಿದೆ.
ಇವರು ಮೊದಲು ಅಸ್ತಮಾದಿಂದ ಬಳಲುತ್ತಿದ್ದರು. ಆ ನಂತರ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಬೇಗನೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎನ್ನಲಾಗಿದೆ. ಅವರು ಎರಡು ಡೋಸ್ ಪಡೆದಿದ್ದರೂ ಅವರಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿತ್ತು. ಸದ್ಯ ವಯಾಗ್ರ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದು, ವಿಶ್ರಾಂತಿಯಲ್ಲಿದ್ದಾರೆ. ಈ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದ್ದು, ಅಲ್ಲಿನ ಲಿಂಕನ್ ಶೈರ್ ನ ಎನ್ ಎಚ್ ಎಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಮೋನಿಕಾ ಅಲ್ಮೇಡಾ ಕೆಲಸ ಮಾಡುತ್ತಿದ್ದರು.