
ನವದೆಹಲಿ: ಅಯೋಧ್ಯ ಶ್ರೀ ರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಮತ್ತು ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ ಅವರಿಗೆ ಆಹ್ವಾನ ನೀಡಲಾಗಿದೆ.
ಅಡ್ವಾಣಿ ಮತ್ತು ಜೋಶಿ ಅವರಿಗೆ ಅವರ ವಯಸ್ಸಿನ ಕಾರಣಕ್ಕೆ ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಬರದಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರವಷ್ಟೇ ಹೇಳಿದ್ದರು.
ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ, ರಥಯಾತ್ರೆ ಕೈಗೊಂಡವರ ಅಡ್ವಾಣಿ, ಮುರುಳಿ ಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಮೊದಲಾದವರು ಕಾರಣಕರ್ತರು. ರಾಮಮಂದಿರಕ್ಕಾಗಿ ಅನೇಕರು ತ್ಯಾಗ ಪಡೆದಿದ್ದಾರೆ. ಇಂತಹ ಹಿರಿಯ ನಾಯಕರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಇದಾದ ನಂತರ ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ನಡೆಯುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಅಡ್ವಾಣಿ, ಜೋಶಿ ಅವರಿಗೆ ವಿಶ್ವ ಹಿಂದೂ ಪರಿಷತ್ ಆಹ್ವಾನಿಸಿದೆ.
ರಾಮ ಮಂದಿರ ಆಂದೋಲನದ ಹರಿಕಾರರಾದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರನ್ನು ಆಹ್ವಾನಿಸಲಾಗಿದ್ದು, ಇಬ್ಬರೂ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.