ನವದೆಹಲಿ : ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 23 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳುವುದಾಗಿ ಸ್ವತಃ ಹರ್ಭಜನ್ ತಿಳಿಸಿದ್ದಾರೆ.
1998ರಲ್ಲಿ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಹರ್ಭಜ್ ಸಿಂಗ್, 103 ಟೆಸ್ಟ್ ಪಂದ್ಯಗಳನ್ನು ಆಡಿ 417 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. 236 ಏಕದಿನ ಪಂದ್ಯ- 269 ವಿಕೆಟ್, 163 ಐಪಿಎಲ್ ಪಂದ್ಯಗಳಲ್ಲಿ 150 ವಿಕೆಟ್ ಗಳಿಸಿದ ಕೀರ್ತಿ ಹರ್ಭಜನ್ ಅವರದ್ದು. ಅನಿಲ್ ಕುಂಬ್ಳೆ ಹಾಗೂ ಆರ್.ಅಶ್ವಿನ್ ನಂತರ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಹರ್ಭಜನ್ ಸಿಂಗ್ ಅವರದ್ದಾಗಿದೆ.
ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿರುವ ಹರ್ಭಜನ್ ಸಿಂಗ್, ನಾನು ಸುದೀರ್ಘ ಕಾಲ ಸಕ್ರಿಯ ಕ್ರಿಕೆಟ್ ಆಡಿರಲಿಲ್ಲ. ಬಹಳ ಹಿಂದೆಯೇ ನಿವೃತ್ತಿ ತೆಗೆದುಕೊಂಡಿದ್ದೆ. ಈ ಬಗ್ಗೆ ಈಗ ಎಲ್ಲರೊಂದಿಗೂ ಹಂಚಿಕೊಳ್ಳುತ್ತಿದ್ದೇನೆ. ನಾನು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದು, ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ನೊಂದಿಗಿನ ಬದ್ಧತೆಯ ಕಾರಣಕ್ಕೆ ಈ ವರ್ಷ ಅವರೊಂದಿಗೆ ಉಳಿಯಲು ಬಯಸುತ್ತೇನೆ. ನಾನು ಯಾವುದೇ ತಂಡದಲ್ಲಿ ಆಡಿದರೂ ಅಗ್ರಸ್ಥಾನದಲ್ಲಿರಲು ಬಯಸುತ್ತೇನೆ ಎಂದಿದ್ದಾರೆ.
ತಮ್ಮ ಯಶಸ್ಸಿನ ಬಗ್ಗೆ ತನ್ನ ಗುರುಗಳಿಗೆ ಧನ್ಯವಾದ ಅರ್ಪಿಸಿರುವ ಹರ್ಭಜನ್, ತಂದೆ-ತಾಯಿ ಬಿಟ್ಟರೆ ತಂಗಿಯರೇ ನನ್ನ ದೊಡ್ಡ ಶಕ್ತಿ. ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಇನ್ಮುಂದೆ ಹೆಚ್ಚು ಸಮಯ ಕಳಿಯುವುದಾಗಿ ತಿಳಿಸಿದ್ದಾರೆ.
ಇನ್ನು ಹರ್ಭಜನ್ ಸಿಂಗ್ ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.