
ಮಂಗಳೂರು: ಖ್ಯಾತ ಪತ್ರಕರ್ತ, ಕಂಚಿನ ಕಂಠದ ಕಾರ್ಯಕ್ರಮ ನಿರೂಪಕರಾದ ಮನೋಹರ್ ಪ್ರಸಾದ್(64) ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ‘ನವ ಭಾರತ’ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಮಂಗಳೂರು ಉದಯವಾಣಿ ವರದಿಗಾರರಾಗಿದ್ದರು. ಬಳಿಕ ಬ್ಯೂರೋ ಚೀಫ್ ಮತ್ತು ಸಹಾಯಕ ಸಂಪಾದಕರ ಹುದ್ದೆಯವರೆಗೆ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು.
ಉತ್ತಮ ಕಥೆಗಾರರು, ಕವಿಯಾಗಿದ್ದ ಮನೋಹರ್ ಪ್ರಸಾದ್ ಅವರು ಕರಾವಳಿ ಇತಿಹಾಸ ಕುರಿತ 600ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮನೋಹರ್ ಪ್ರಸಾದ್ ನಿಧನ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಗಣ್ಯರು, ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.