ನವದೆಹಲಿ: ಕಪಿಲ್ ಸಿಬಲ್ ಬಳಿಕ ಕಾಂಗ್ರೆಸ್ ಗೆ ಇದೀಗ ಮತ್ತೋರ್ವ ಹಿರಿಯ ನಾಯಕ ಗುಡ್ ಬೈ ಹೇಳಿದ್ದು, ಗುಲಾಂ ನಬಿ ಆಜಾದ್ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದಾರೆ.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 5 ಪುಟಗಳ ಸುದೀರ್ಘ ಪತ್ರ ಬರೆದಿರುವ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗುಲಾಂ ನಬಿ ಆಜಾದ್, ರಾಹುಲ್ ಗಾಂಧಿ ಪಕ್ಷಕ್ಕೆ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲವೂ ಹಾಳಾಯಿತು. ಅನುಭವಿ ನಾಯಕರನ್ನು ಕಡೆಗಣಿಸಲಾಯಿತು. ಚುನಾವಣೆ ಸಂದರ್ಭದಲ್ಲಿಯೂ ಹಿರಿಯ ನಾಯಕರ ಸಲಹೆಯನ್ನು ಕೇಳಲಿಲ್ಲ. 2019ರ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಇದೇ ಕಾರಣ. ಕಾಂಗ್ರೆಸ್ ಪಕ್ಷ ರಿಮೋಟ್ ಕಂಟ್ರೋಲ್ ಮಾಡೆಲ್ ಆಗಿದೆ ಎಂದು ಕಿಡಿಕಾರಿದ್ದಾರೆ.
ಹಲವು ಸಂದರ್ಭಗಳಲ್ಲಿ ರಾಹುಲ್ ಗಾಂಧಿ ಪ್ರಬುದ್ಧತೆ ತೋರಿಲ್ಲ, ಸುಗ್ರೀವಾಜ್ಞೆ ಪ್ರತಿಯನ್ನು ಬಹಿರಂಗವಾಗಿ ಹರಿದು ಹಾಕಿದರು. ಪಕ್ಷದ ಇತ್ತೀಚಿನ ಹಲವು ಬೆಳವಣಿಗೆಗಳ ಬಗ್ಗೆಯೂ ಅಸಮಾಧಾನವನ್ನು ವ್ಯಕ್ತಪಡಿಸಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.