ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ..! 20-07-2021 11:00AM IST / No Comments / Posted In: Karnataka, Latest News, Live News ಪ್ರತಿದಿನ ಮನೆ, ಅಂಗಡಿಗಳು ಕೈಗಾರಿಕಾ ಪ್ರದೇಶ ಹೀಗೆ ಸಾಕಷ್ಟು ಕಡೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಎಸೆಯಲಾಗುತ್ತದೆ. ಭೂಮಿಯಲ್ಲಿ ಕರಗದ ಈ ತ್ಯಾಜ್ಯಗಳು ಪರಿಸರ ನಾಶ ಮಾಡೋದ್ರ ಜೊತೆ ಜೊತೆಗೆ ಮೂಕ ಪ್ರಾಣಿಗಳ ಪಾಲಿಗೆ ಜೀವ ಕಂಟಕಗಳಾಗಿ ಮಾರ್ಪಟ್ಟಿವೆ. ಗೊತ್ತಿಲ್ಲದೆಯೇ ಈ ಪ್ಲಾಸ್ಟಿಕ್ಗಳನ್ನ ಸೇವನೆ ಮಾಡುವ ಪ್ರಾಣಿಗಳು ಜೀವಕ್ಕೆ ಸಂಚಕಾರ ತಂದುಕೊಳ್ತಿವೆ. ಅಧ್ಯಯನಗಳ ಪ್ರಕಾರ ಹಸುವು ಪ್ರತಿನಿತ್ಯ ತಾನು ಸೇವಿಸಬೇಕಾದ ಆಹಾರಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ಗಳನ್ನ ಸೇವನೆ ಮಾಡುತ್ತಿದೆಯಂತೆ..! ಈ ಪ್ಲಾಸ್ಟಿಕ್ ದೇಹದ ಒಳಗೆ ಸೇರಿದ ಬಳಿಕ ಹಸುಗಳ ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮವನ್ನ ಬೀರುತ್ತದೆ. ಇದರಿಂದ ಅವುಗಳಿಗೆ ಹಾಲನ್ನ ನೀಡಲು ಸಾಧ್ಯವಾಗೋದಿಲ್ಲ. ಒಂದು ವೇಳೆ ಅವುಗಳು ಹಾಲನ್ನ ನೀಡಿದ್ದರೂ ಸಹ ಅದರಲ್ಲಿ ವಿಷಕಾರಿ ಅಂಶಗಳು ಸೇರಿಕೊಂಡಿರುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚಿಗೆ ಬೆಳಕಿಗೆ ಬಂದ ಘಟನೆಯೊಂದು ನಾವೆಷ್ಟು ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದೇವೆ ಅನ್ನೋದು ಕೈಗನ್ನಡಿಯಾಗಿ ನಿಂತಿದೆ. ಜುಲೈ 15ರಂದು ಕಡೂರು ತಾಲೂಕಿನಲ್ಲಿ ಪಶುವೈದ್ಯರೊಬ್ಬರು ಹಸುವೊಂದರ ಹೊಟ್ಟೆಯಿಂದ ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನ ಹೊರತೆಗೆದಿದ್ದಾರೆ..! ಬೀದಿಗಳಲ್ಲಿ ಆಹಾರ ಸೇವಿಸುತ್ತಿದ್ದ ಈ ಹಸು ಹುಲ್ಲು, ತರಕಾರಿ, ಹಣ್ಣುಗಳ ಜೊತೆಯಲ್ಲಿ ಪ್ಲಾಸ್ಟಿಕ್ನ್ನೂ ಸೇವನೆ ಮಾಡಿದೆ. ಮೂರರಿಂದ ನಾಲ್ಕು ವರ್ಷ ಪ್ರಾಯದ ಈ ಹಸುವಿಗೆ ಬರೋಬ್ಬರಿ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಪ್ಲಾಸ್ಟಿಕ್ನ್ನು ಹೊರತೆಗೆಯಲಾಗಿದೆ. ಹಸುವಿಗೆ ಜೀರ್ಣಶಕ್ತಿ ಕ್ಷೀಣಿಸುತ್ತಿದೆ ಎಂಬುದನ್ನ ಗಮನಿಸಿದ ಮಾಲೀಕರು ಪಶು ವೈದ್ಯರನ್ನ ಸಂಪರ್ಕಿಸಿದ ವೇಳೆಯಲ್ಲಿ ಈ ಆಘಾತಕಾರಿ ವಿಚಾರ ತಿಳಿದುಬಂದಿದೆ.