ಪನ್ನೀರ್ ಎಂದರೆ ಕೆಲವರಿಗೆ ತುಂಬಾ ಇಷ್ಟ. ಅದರಲ್ಲೂ ಪನ್ನೀರ್ ನಿಂದ ಪರೋಟ ತಯಾರಿಸಿದರೆ ಕೇಳಬೇಕೆ…? ಪನ್ನೀರ್ ಬಳಸಿ ಸುಲಭವಾಗಿ ಪರೋಟ ಮಾಡುವ ವಿಧಾನ ಇಲ್ಲಿದೆ. ಮನೆಯಲ್ಲಿ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – 1 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಅಗತ್ಯವಿರುವಷ್ಟು, ಎಣ್ಣೆ – 1 ಟೀ ಸ್ಪೂನ್, ಪನ್ನೀರ್ – 1.5 ಕಪ್ ತುರಿ, ಓಮ ಕಾಳು – 1/2 ಟೀ ಸ್ಪೂನ್, ಖಾರದ ಪುಡಿ – 1 ಟೀ ಸ್ಪೂನ್, ಗರಂ ಮಸಾಲ ಪುಡಿ – 1/2 ಟೀ ಸ್ಪೂನ್, ಜೀರಿಗೆ ಪುಡಿ – 1/2 ಟೀ ಸ್ಪೂನ್, ಲಿಂಬೆ ಹಣ್ಣಿನ ರಸ – ಸ್ವಲ್ಪ, ಕೊತ್ತಂಬರಿಸೊಪ್ಪು – 2 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಒಂದು ಬೌಲ್ ಗೆ ಗೋಧಿ ಹಿಟ್ಟು ,ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ ಇದರ ಮೇಲೆ 1 ಟೀ ಸ್ಪೂನ್ ಎಣ್ಣೆ ಹಚ್ಚಿ 20 ನಿಮಿಷಗಳ ಕಾಲ ಹಾಗೇಯೇ ಮುಚ್ಚಿ ಇಡಿ.
ಪನ್ನೀರ್ ತುರಿದು ಅದಕ್ಕೆ ಉಪ್ಪು, ಖಾರದ ಪುಡಿ, ಲಿಂಬೆ ಹಣ್ಣಿನ ರಸ, ಜೀರಿಗೆ ಪುಡಿ, ಗರಂ ಮಸಾಲ, ಓಮದ ಕಾಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರಿಂದ ಹದ ಗಾತ್ರದ ಉಂಡೆ ಕಟ್ಟಿಕೊಳ್ಳಿ.
ನಂತರ ಗೋಧಿ ಹಿಟ್ಟಿನ ಮಿಶ್ರಣದಿಂದ ಉಂಡೆ ಕಟ್ಟಿಕೊಂಡು ಚಿಕ್ಕ ಚಪಾತಿ ಲಟ್ಟಿಸಿಕೊಳ್ಳಿ. ಇದರ ಮಧ್ಯೆ ಪನ್ನೀರ್ ಮಿಶ್ರಣದ ಉಂಡೆ ಇಟ್ಟು ಮಡಚಿ ಮತ್ತೊಮ್ಮೆ ಲಟ್ಟಿಸಿಕೊಳ್ಳಿ. ತುಂಬಾ ತೆಳುವಾಗಿ ಲಟ್ಟಿಸಿಕೊಳ್ಳುವುದು ಬೇಡ. ಇದನ್ನು ಕಾದ ಹಂಚಿಗೆ ಹಾಕಿ ಎಣ್ಣೆ ಸವರಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಮೊಸರಿನೊಂದಿಗೆ ಸವಿದರೆ ತುಂಬಾ ಚೆನ್ನಾಗಿರುತ್ತದೆ.