ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರವೇ ಉಚಿತ ‘ಲ್ಯಾಪ್ ಟಾಪ್’ ವಿತರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ನಂತರ ಮಾತನಾಡಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್.ಎಂ.ಎಸ್. ವ್ಯವಸ್ಥೆ ಜಾರಿಗೆ ಬಂದಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಲ್ಯಾಪ್ಟಾಪ್ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಹಾಗೂ , ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಸ್ಟೈಫೆಂಡ್ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಂತ ಸಭೆಯಲ್ಲಿ ಚರ್ಚಿಸಲಾಗಿದೆ.
ಅದೇ ರೀತಿ ಮೈಸೂರು ಮಹಾರಾಣಿ ಆರ್ಟ್ಸ್ ಕಾಲೇಜು ಹಾಸ್ಟೆಲ್ ಆವರಣದಲ್ಲಿ 99 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ತಲಾ ಸಾವಿರ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ನಂತರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಆದ್ಯತೆಗಳನ್ನು ಗುರುತಿಸಿ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಈಗಾಗಲೇ ಇಲಾಖೆಯ ಬಳಿ 47 ಕೋಟಿ ರೂ. ಲಭ್ಯವಿದ್ದು ಮುಂದಿನ ವರ್ಷದ ಆಯವ್ಯಯದಲ್ಲಿ ಹೆಚ್ಚುವರಿ ಅನುದಾನ ಒದಗಿಸುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.