ಕಲಬುರಗಿ: ಸಾರ್ವಜನಿಕರ ಪ್ರಯಾಣಕ್ಕಾಗಿ ಬಳಸುತ್ತಿರುವ ಮ್ಯಾಕ್ಸಿಕ್ಯಾಬ್, ಕಾಂಟ್ಯ್ರಾಕ್ಟ್ ಕ್ಯಾರೇಜ್ ಬಸ್, ಶಾಲಾ ಬಸ್ ಮತ್ತು ಪಿ.ಎಸ್.ವಿ ಬಸ್‍ಗಳು ಸಾರ್ವಜನಿಕರಿಂದ ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿದಲ್ಲಿ ಪ್ರಯಾಣಿಕರು ವಾಹನ ಸಂಖ್ಯೆ ಸಮೇತ ಆರ್.ಟಿ.ಓ ಕಚೇರಿಗೆ ದೂರು ಕೊಡಬೇಕು ಎಂದು ಉಪ ಸಾರಿಗೆ ಆಯುಕ್ತ ಮತ್ತು ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಅನಿರ್ದಿಷ್ಟಾವಧಿಗೆ ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರಿಗೆ ಸುಗಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಖಾಸಗಿ ವಾಹನಗಳನ್ನು ನಿಗದಿತ ದರದಲ್ಲಿ ವಸೂಲಿ ಮಾಡಿ ಸಂಚರಿಸಲು ಅನುಮತಿ ನೀಡಲಾಗಿದೆ.
ಆದರೆ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಅತಿ ಹೆಚ್ಚಿನ ದರವನ್ನು ವಾಹನದ ಮಾಲೀಕರು ವಸೂಲಿ ಮಾಡುತ್ತಿದ್ದಾರೆಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ವಾಹನದ ಮಾಲೀಕರು ಹೆಚ್ಚಿನ ಪ್ರಯಾಣ ದರವನ್ನು ವಸೂಲಿ ಮಾಡಿದ್ದು ಗಮನಕ್ಕೆ ಬಂದಲ್ಲಿ ವಾಹನ ಸಂಖ್ಯೆಯ ಸಮೇತ ಆರ್.ಟಿ.ಓ ಕಚೇರಿಗೆ ಲಿಖಿತ ರೂಪದಲ್ಲಿ ದೂರು ನೀಡಿದಲ್ಲಿ ಅಂತಹ ವಾಹನದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.