ಬೆಂಗಳೂರು: ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ವಿವಿಧ ವಾಹನ ಸಂಘಗಳು ಮನವಿ ಮಾಡಿದ್ದು, ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿಂದಿನ ರೀತಿಯಲ್ಲೇ ವಾಹನಗಳಿಗೆ ಹಳೆ ತೆರಿಗೆ ವ್ಯವಸ್ಥೆ ಮುಂದುವರೆಯಲಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿವಿಧ ಶ್ರೇಣಿಯ ವಾಹನಗಳ ತೆರಿಗೆ ಪರಿಷ್ಕರಣೆಯಿಂದ ಹೊರೆಯಾಗುತ್ತದೆ ಎಂದು ವಾಹನ ಸಂಘಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದವು. ವಾಹನಗಳಿಗೆ 5ರಿಂದ 15 ಲಕ್ಷ ರೂ.ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. ಹಳದಿ ಬೋರ್ಡ್ ವಾಹನಗಳ ಮಾಲೀಕರು ಸಾಲ ಪಡೆಯುವುದು, ಹಳೆ ವಾಹನ ಖರೀದಿಸುವುದು ಸಾಮಾನ್ಯವಾಗಿದೆ. ರಾಜ್ಯದಲ್ಲಿ ಹೆಚ್ಚಿನ ತೆರಿಗೆ ಇದೆ ಎಂದು ಜೀವಿತಾವಧಿ ತೆರಿಗೆ ಕಡಿಮೆ ಇರುವ ಬೇರೆ ರಾಜ್ಯಗಳಲ್ಲಿ ವಾಹನ ಖರೀದಿಸಿ ನೋಂದಣಿ ಮಾಡಿಕೊಂಡು ಇಲ್ಲಿ ಓಡಿಸುತ್ತಾರೆ. ಇದರಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಕೈತಪ್ಪುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ಹಾಗಾಗಿ ವಾಹನಗಳಿಗೆ ಹಳೆಯ ತೆರಿಗೆ ವ್ಯವಸ್ಥೆ ಮುಂದುವರೆಸಲು ಸಿಎಂ ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.