
ವಾಹನ ಖರೀದಿಗೆ ಪ್ಲಾನ್ ಮಾಡಿದ್ದರೆ ಅಥವಾ ಈಗಾಗಲೇ ವಾಹನ ಖರೀದಿಸಿದ್ದರೆ, ಅದಕ್ಕಾಗಿ ವಾಹನ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು. ಅಪಘಾತ, ಕಳ್ಳತನವಾದ್ರೆ ವೆಚ್ಛ ಭರಿಸುವ ಮೂಲಕ ಆರ್ಥಿಕ ಭದ್ರತೆ ಸಿಗುತ್ತದೆ. ವಾಹನ ವಿಮಾ ಪಾಲಿಸಿಯನ್ನು ಖರೀದಿಸುವ ಮೊದಲು ಅಗತ್ಯ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮೋಟಾರು ವಾಹನ ಕಾಯಿದೆಯಡಿ, ವಾಣಿಜ್ಯ ವಾಹನಗಳಿಗೆ ವಿಮಾ ರಕ್ಷಣೆ ಮತ್ತು ಕಾನೂನುಗಳು ವಿಭಿನ್ನವಾಗಿವೆ. ವೈಯಕ್ತಿಕ ಕಾರನ್ನು ವಾಣಿಜ್ಯಿಕವಾಗಿ ಬಳಸಿದರೆ, ಅಪಘಾತದ ಸಂದರ್ಭದಲ್ಲಿ, ವಿಮಾ ಕಂಪನಿಗಳು ಕ್ಲೈಮ್ ತಿರಸ್ಕರಿಸುತ್ತವೆ.
ಪಾಲಿಸಿ ಅವಧಿಯಲ್ಲಿ, ಕಾರಿನ ಬಿಡಿಭಾಗಗಳನ್ನು ಮಾರ್ಪಡಿಸಿದ್ದಲ್ಲಿ ಅಥವಾ ಸ್ಥಾಪಿಸಿದರೆ, ಪಾಲಿಸಿಯನ್ನು ನವೀಕರಿಸುವಾಗ ತಿಳಿಸಬೇಕು. ಇಲ್ಲವಾದ್ರೆ ವಿಮಾ ಕಂಪನಿ ಕ್ಲೈಂ ತಿರಸ್ಕರಿಸುತ್ತದೆ.
ವಿಮಾ ಪಾಲಿಸಿಯನ್ನು ಖರೀದಿಸುವಾಗ, ಜನರು ಹಣವನ್ನು ಉಳಿಸಲು ಕಾರಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಮರೆಮಾಚುತ್ತಾರೆ. ಕೆಲವೊಂದು ನಕಲಿ ದಾಖಲೆ ನೀಡುತ್ತಾರೆ. ಇದ್ರಿಂದ ಕ್ಲೈಂ ತಿರಸ್ಕಾರಗೊಳ್ಳುವ ಸಾಧ್ಯತೆಯಿರುತ್ತದೆ. ವಿಮಾ ಕಂಪನಿಯು, ನಕಲಿ ಕ್ಲೈಮ್ ಬಗ್ಗೆ ಮಾಹಿತಿ ಪಡೆಯಲು ಕಾನೂನು ಕ್ರಮ ಕೈಗೊಳ್ಳಬಹುದು.
ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸದಿದ್ದರೆ, ಪಾಲಿಸಿ ಅಮಾನ್ಯವಾಗುತ್ತದೆ. ಭಾರತದ ಹೆಚ್ಚಿನ ಕಂಪನಿಗಳು 90 ದಿನಗಳ ಕಾಲಾವಕಾಶವನ್ನು ನೀಡುತ್ತವೆ. ಈ ಅವಧಿಯಲ್ಲಿ ಪಾಲಿಸಿಯನ್ನು ನವೀಕರಿಸದಿದ್ದರೆ, ಕಾರ್ ವಿಮೆಯ ಎಲ್ಲಾ ಪ್ರಯೋಜನ ಕೈತಪ್ಪಿ ಹೋಗುತ್ತದೆ.
ಚಾಲನಾ ಪರವಾನಗಿ ಇಲ್ಲದೆ ಕಾರನ್ನು ಚಾಲನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಸಾವಿರಾರು ಜನರು ದೇಶದಲ್ಲಿ ಪರವಾನಗಿ ಇಲ್ಲದೆ ಕಾರುಗಳನ್ನು ಓಡಿಸುತ್ತಾರೆ. ಕಾರು ಅಪಘಾತಕ್ಕೀಡಾದರೆ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರನ್ನು ಚಲಾಯಿಸುತ್ತಿದ್ದರೆ, ವಿಮಾ ಕಂಪನಿ ಕ್ಲೈಮ್ ತಿರಸ್ಕರಿಸುತ್ತದೆ.