ಹೊಸ ವರ್ಷದಲ್ಲಿ ಸಸ್ಯಹಾರಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಸಸ್ಯಾಹಾರ ಥಾಲಿಯು ಜನವರಿ ತಿಂಗಳಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 5 ರಷ್ಟು ಹೆಚ್ಚಾಗಿದೆ. ಮಾಂಸಾಹಾರಿ ಥಾಲಿ ಶೇಕಡಾ 13ರಷ್ಟು ಅಗ್ಗವಾಗಿದೆ.
ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಅಂಡ್ ಅನಾಲಿಟಿಕ್ಸ್ ರಿಸರ್ಚ್ ಬಿಡುಗಡೆ ಮಾಡಿರುವ ರೈಸ್ ರೋಟಿ ದರದ ವರದಿಯಲ್ಲಿ ಈ ಮಾಹಿತಿ ಇದೆ. ವರದಿ ಪ್ರಕಾರ, ಬೇಳೆಕಾಳುಗಳು, ಅಕ್ಕಿ, ಈರುಳ್ಳಿ ಮತ್ತು ಟೊಮೆಟೊಗಳಂತಹ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದ್ರಿಂದಾಗಿ ಸಸ್ಯಾಹಾರ ಥಾಲಿ ದುಬಾರಿಯಾಗಿದೆ. ಕೋಳಿ ದರದಲ್ಲಿ ಇಳಿಕೆ ಕಂಡಿರುವ ಕಾರಣ ಮಾಂಸಾಹಾರಿ ಥಾಲಿ ಬೆಲೆ ಇಳಿದಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಬ್ರಾಯ್ಲರ್ ಕೋಳಿ ಬೆಲೆ ಶೇಕಡಾ 26 ರಷ್ಟು ಕುಸಿದಿದೆ.
ಅಕ್ಕಿ ಶೇಕಡಾ 14 ರಷ್ಟು ಏರಿಕೆಯಾಗಿದೆ. ಬೇಳೆಕಾಳುಗಳ ಬೆಲೆ ಶೇಕಡಾ 21 ರಷ್ಟು ಹೆಚ್ಚಾಗಿದೆ. ಈರುಳ್ಳಿ ಹಾಗೂ ಟೊಮೊಟೊ ಬೆಲೆ ತಲಾ ಶೇಕಡಾ 35 ಹಾಗೂ ಶೇಕಡಾ 20ರಷ್ಟು ಏರಿಕೆಯಾಗಿದೆ. ವಾರ್ಷಿಕ ಆಧಾರದ ಮೇಲೆ ನೋಡಿದ್ರೆ ಸಸ್ಯಹಾರ ಬೆಲೆ ಹೆಚ್ಚಾಗಿದ್ದು, ಮಾಸಿಕವಾಗಿ ನೋಡಿದ್ರೆ ಸಸ್ಯಹಾರದ ಬೆಲೆ ಇಳಿದಿದೆ.