ಮನೆಯಂಗಳಲ್ಲಿ ತುಸು ಜಾಗವಿದ್ದರೆ ಅದನ್ನು ಹಾಗೆ ಖಾಲಿ ಬಿಡಬೇಡಿ. ಅಡುಗೆಮನೆಗೂ ಆರೋಗ್ಯಕ್ಕೂ ನೆರವಾಗುವ ಕೆಲವಷ್ಟು ಸೊಪ್ಪು ತರಕಾರಿಗಳನ್ನು ಅಂಗೈಯಗಲದ ಜಾಗದಲ್ಲೂ ಬೆಳೆಯಬಹುದು.
ಮನೆಯ ತಾರಸಿಯನ್ನೂ ಈ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಹಾಲಿನ ಪಾಕೆಟ್ ಒಡೆದಾದ ಬಳಿಕ ಉಳಿಯುವ ಕವರ್ ಅನ್ನು ಎಸೆಯದೆ ಅದರಲ್ಲಿ ನಾಲ್ಕುಮುಷ್ಟಿ ಮಣ್ಣು ಹಾಕಿ. ಕೊಳೆತ ಟೊಮೆಟೊ, ಹಣ್ಣಾದ ಹಾಗಲಕಾಯಿ ಬೀಜಗಳನ್ನು ಅದರಲ್ಲಿ ಉದುರಿಸಿ. ಗಿಡ ಮೊಳಕೆ ಬಂದ ಬಳಿಕ ಅದನ್ನು ದೊಡ್ಡ ಗೋಣಿಗೆ ಅಥವಾ ನೆಲಕ್ಕೆ ವರ್ಗಾಯಿಸಬಹುದು.
ಹಳೆಯ ಬಾಟಲಿಗಳನ್ನು ಮುಚ್ಚಳದ ಬಳಿ ಕತ್ತಿರಿಸಿ, ಬುಡದಲ್ಲಿ ಸ್ವಲ್ಪ ಮಣ್ಣು ಹಾಕಿ ಬ್ರಾಹ್ಮಿ ಎಲೆ, ಸಾಂಬಾರಬಳ್ಳಿ, ಅಮೃತಬಳ್ಳಿ ಮೊದಲಾದವುಗಳನ್ನು ನೆಟ್ಟು ಬಿಟ್ಟರೆ ಹೆಚ್ಚು ಆರೈಕೆ ಇಲ್ಲದೆಯೂ ಇದು ಬೆಳೆಯುತ್ತದೆ.
ಗೊಬ್ಬರಕ್ಕೂ ಅನಗತ್ಯ ದುಡ್ಡು ಖರ್ಚು ಮಾಡಬೇಕಿಲ್ಲ. ಚಹಾ ಸೋಸಿ ಉಳಿಯುವ ಚೊಗಟೆ, ತರಕಾರಿಗಳ ಸಿಪ್ಪೆ, ಉಳಿಯುವ ಆಹಾರಗಳನ್ನು ಅನಗತ್ಯವಾಗಿ ಎಸೆಯದೆ ಗಿಡದ ಬುಡಕ್ಕೆ ಹಾಕಿ ಕೊಳೆಯಿಸಿದರೆ ಅದೇ ಅತ್ಯುತ್ತಮ ಗೊಬ್ಬರವಾಗುತ್ತದೆ.