ಬೆಂಗಳೂರು: ಜಾತಿಗಣತಿ ವರದಿ ಜಾರಿಗೆ ವೀರಶೈವ ಮಹಾಸಭಾ ಕಿಡಿಕಾರಿದೆ. ವೈಜ್ಞಾನಿಕ ಜಾತಿ ಗಣತಿಗೆ ಪಟ್ಟು ಹಿಡಿದಿದೆ.
ಸರ್ಕಾರ ಜಾತಿ ಗಣತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಮಂಗಳವಾರ ಸಂಜೆ ನಡೆದ ಸಮುದಾಯದ ರಾಜಕೀಯ ಮುಖಂಡರು, ಗಣ್ಯರು ವೈಜ್ಞಾನಿಕವಾಗಿ ಪುನಃ ಜಾತಿಗಣತಿ ನಡೆಸಲು ಸರ್ಕಾರಕ್ಕೆ ಒತ್ತಾಯಿಸಲು ಚರ್ಚೆ ನಡೆಸಿದ್ದಾರೆ.
ಸಮುದಾಯದ ಮುಖಂಡರು ಪಕ್ಷತೀತವಾಗಿ ಹೋರಾಟ ನಡೆಸಬೇಕು. ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಈ ಬಗ್ಗೆ ಮಾತನಾಡಿ, ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿ ಅವೈಜ್ಞಾನಿಕವಾಗಿದೆ. ವೀರಶೈವ ಲಿಂಗಾಯಿತ ಸಮುದಾಯದ ನಿಖರ ಅಂಕಿ ಅಂಶಗಳ ಬಗ್ಗೆ ಮಹಾಸಭೆಯಿಂದಲೇ ಸಮೀಕ್ಷೆ ನಡೆಸಿ 18 ತಿಂಗಳಲ್ಲಿ ವರದಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಒಂದು ವೇಳೆ ಸರ್ಕಾರ ಜಾತಿ ಗಣತಿ ಜಾರಿಗೊಳಿಸಲು ಮುಂದಾದರೆ ಮುಂದಿನ ಹೋರಾಟದ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯಲ್ಲಿ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.