ಬೆಂಗಳೂರು: ಎಂಇಎಸ್ ನಿಷೇಧಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಅನೇಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಬಂದ್ ಗೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.
ಅಂತೆಯೇ ಫಿಲ್ಮ್ ಚೇಂಬರ್ ನಿಂದಲೂ ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡುವುದಾಗಿ ಹೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಫಿಲ್ಮ್ ಚೇಂಬರ್ ನೈತಿಕ ಬೆಂಬಲ ಬೇಕಿಲ್ಲ ಎಂದು ಹೇಳಿದ್ದಾರೆ.
ಫಿಲ್ಮ್ ಚೇಂಬರ್ ನೈತಿಕ ಬೆಂಬಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನೈತಿಕ ಬೆಂಬಲವನ್ನು ನಾನು ತಿರಸ್ಕರಿಸಿದ್ದೇನೆ. ಫಿಲ್ಮ್ ಚೇಂಬರ್ ನೀಡಿರುವ ನೈತಿಕ ಬೆಂಬಲ ನಮಗೆ ಬೇಡವೇ ಬೇಡ. ಎಲ್ಲರೂ ಬೀದಿಗಿಳಿದು ಬಂದ್ ಗೆ ಬೆಂಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಯಾವ ಉದ್ದೇಶಕ್ಕೆ ನೈತಿಕ ಬೆಂಬಲ ನೀಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾವೆಲ್ಲ ಬೀದಿಯಲ್ಲಿ ಹೋರಾಟ ಮಾಡಬೇಕಾ? ಅವರು ಮಾತ್ರ ನೈತಿಕ ಬೆಂಬಲ ನೀಡಿ ಮನೆಯಲ್ಲಿ ಇರಬೇಕಾ ಎಂದು ಪ್ರಶ್ನಿಸಿದ್ದಾರೆ.
ಕನ್ನಡದವರು ನಿಮ್ಮ ಸಿನಿಮಾಗಳನ್ನು ನೋಡಬೇಕು. ಆದರೆ, ಕನ್ನಡಪರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದೀರಿ. ಕನ್ನಡ ಚಿತ್ರರಂಗದ ಪರ ನಾನು ಹೋರಾಟವನ್ನು ಮಾಡಿದ್ದೇನೆ. ಕನ್ನಡ ಬಾವುಟವನ್ನು ಸುಟ್ಟಿದ್ದಾರೆ. ಸುಡಬಹುದೇ? ರಾಯಣ್ಣನ ಪ್ರತಿಮೆ ಹಾಳು ಮಾಡಿದ್ದಾರೆ ಈ ರೀತಿ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿಯೂ ನೀವು ನೈತಿಕ ಬೆಂಬಲ ಎಂದು ಹೇಳುತ್ತಿದ್ದೀರಲ್ಲ. ಚಿತ್ರರಂಗದವರಾಗಿ ನೀವು ಮೊದಲು ಬೆಂಬಲ ನೀಡಬೇಕಿತ್ತು. ನೈತಿಕ ಬೆಂಬಲ ನೀಡಿದರೆ ಕನ್ನಡ ಬಾವುಟವನ್ನು ಸುಡಲು ನಿಮ್ಮ ನೈತಿಕ ಬೆಂಬಲ ಇದೆ ಎಂದು ಅರ್ಥ. ನಿಮ್ಮ ನೈತಿಕ ಬೆಂಬಲ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ. ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ. ಚಿತ್ರಮಂದಿರಗಳ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.