
ಬೆಂಗಳೂರು: ಕನ್ನಡಿಗರ ಮೇಲೆ ಎಂಇಎಸ್ ದರ್ಪ, ದೌರ್ಜನ್ಯ ಖಂಡಿಸಿ ಕನ್ನಡ ನಾಡು, ನೆಲ, ಜಲ, ಭಾಷೆ ರಕ್ಷಣೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಕರೆ ನೀಡಿರುವ ಕರ್ನಾಟಕ ಬಂದ್ ಹೋರಾಟ ತೀವ್ರಗೊಂಡಿದೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ದಿದ್ದ ಪೊಲೀಸರನ್ನೇ ವಾಟಾಳ್ ನಾಗರಾಜ್ ಪೇಚಿಗೆ ಸಿಲುಕಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಸ್ ನಿಂದ ಕೆಳಗಿಳಿಯಲ್ಲ ಎಂದು ಪಟ್ತು ಹಿಡಿದು ಬಸ್ ನಲ್ಲಿಯೇ ಕುಳಿತು ಪ್ರತಿಭಟನಿಸಿದ್ದಾರೆ. ಪೊಲೀಸರು ಮನವೊಲಿಕೆಗೆ ಮುಂದಾದರೂ ಜಗ್ಗದ ವಾಟಳ್ ನಾಗರಾಜ್ ನನ್ನನ್ನು ವಾಪಾಸ್ ಟೌನ್ ಹಾಲ್ ಗೆ ಕರೆದುಕೊಂಡು ಹೋಗಿ ಬಿಡಿ. ಯಾವ ಕಾರಣಕ್ಕೂ ಬಸ್ ನಿಂದ ಇಳಿಯಲ್ಲ ಎಂದಿದ್ದಾರೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಟೌನ್ ಹಾಲ್ ಮುಂಭಾಗದಿಂದ ನಡೆಯಬೇಕಿದ್ದ ಪ್ರತಿಭಟನಾ ರ್ಯಾಲಿಗೆ ಪೊಲೀಸರು ತಡೆಯೊಡ್ಡಿದ್ದರು. ಮೆರವಣಿಗೆ ಆರಂಭಕ್ಕೂ ಮುನ್ನವೇ ಪೊಲೀಸರು ವಾಟಾಳ್ ನಾಗರಾಜ್, ಸಾರಾ.ಗೋವಿಂದು ಅವರನ್ನು ವಶಕ್ಕೆ ಪಡೆದಿದ್ದರು. ವಾಟಾಳ್ ನಾಗರಾಜ್ ಸೇರಿದಂತೆ ಹಲವು ನಾಯಕರು ಟೌನ್ ಹಾಲ್ ಬಳಿ ತಮ್ಮ ವಾಹನದಲ್ಲಿ ಆಗಮಿಸುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ವಾಟಾಳ್ ನಾಗರಾಜ್ ಕಾರಿನಿಂದ ಇಳಿಯುತ್ತಿದ್ದಂತೆಯೇ, ಮಾತನಾಡಲೂ ಅವಕಾಶ ನೀಡದೇ ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ದಿದ್ದಾರೆ. ಬಲವಂತದಿಂದ ಕರೆದೊಯ್ದರೆ ಬಸ್ ಇಳಿಯಲ್ಲ ಎಂದು ಎಚ್ಚರಿಸಿದ್ದಾರೆ.
ಫ್ರೀಡಂ ಪಾರ್ಕ್ ಬಳಿ ಬಸ್ ತಂದು ನಿಲ್ಲಿಸಿ ವಾಟಾಳ್ ನಾಗರಾಜ್ ಅವರನ್ನು ಕೆಳಗಿಳಿಯುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಬಸ್ ನಿಂದ ಕೆಳಗಿಳಿಯದ ಬಾಟಾಳ್ ನಾಗರಾಜ್, ಯಾವ ಕಾರಣಕ್ಕು ಬಸ್ ನಿಂದ ಕೆಳಗೆ ಇಳಿಯಲ್ಲ, ಯಾಕೆ ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸಿದಿರಿ? ನನ್ನನ್ನು ಬಲವಂತದಿಂದ ಕೆಳಗಿಳಿಸಲು ಯತ್ನಿಸಿದರೆ ಹೋರಾಟ ಇನ್ನಷ್ಟು ಉಗ್ರಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ಪೊಲೀಸರು, ಬೇರೆ ಬೇರೆ ಊರುಗಳಿಂದ ಬಂದಿರುವ ಹೋರಾಟಗಾರರು ನಿಮ್ಮನ್ನು ನೋಡಬೇಕಂತೆ ಹಾಗಾಗಿ ಬಸ್ ನಿಂದ ಕೆಳಗಿಳಿದು ಬನ್ನಿ ಎಂದು ಮನವೊಲಿಸಲು ಮುಂದಾಗಿದ್ದಾರೆ. ಆದರೂ ಕೇಳದ ವಾಟಾಳ್ ನಾಗರಾಜ್, ಇಲ್ಲಿಂದಲೇ ನನ್ನನ್ನು ನೋಡಿ ನಾನು ಬಸ್ಸಿನಿಂದ ಇಳಿಯಲ್ಲ. ನನ್ನನ್ನು ಇದೇ ಬಸ್ ನಲ್ಲಿ ಟೌನ್ ಹಾಲ್ ಗೆ ಕರೆದುಕೊಂದು ಹೋಗಿ ಅಲ್ಲಿ ಇಳಿಯುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದಾರೆ.