
ಬೆಂಗಳೂರು: ಕನ್ನಡಿಗರ ಮೇಲೆ ಎಂಇಎಸ್, ಶಿವಸೇನೆ ಪುಂಡರ ಹಲ್ಲೆ ಖಂಡಿಸಿ, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಕನ್ನಡಿಗರ ರಕ್ಷಣೆಗಾಗಿ, ನೆಲ-ಜಲ-ಭಾಷೆ ಸಂರಕ್ಷಣೆಗಾಗಿ ಆಗ್ರಹಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಕನ್ನಡ ನೆಲದಲ್ಲೇ ಎಂಇಎಸ್ ಪುಂಡರು, ಬೇರೆ ರಾಜ್ಯದವರು ಕನ್ನಡಿಗರ ಮೇಲೆ ದರ್ಪ, ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಇಂತಹ ಘಟನೆಗಳಿಗೆ ಸರ್ಕಾರ ಬ್ರೇಕ್ ಹಾಕಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಂದ್ ನಡೆಸುತ್ತಿದ್ದೇವೆ. ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ.
ನಾವು ಯಾರಿಗೋಸ್ಕರ ಚಳುವಳಿ ಮಾಡುತ್ತಿದ್ದೇವೆ? ಕನ್ನಡಿಗರಿಗಾಗಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ವ್ಯವಸ್ಥಿತವಾಗಿ ಪೊಲೀಸರಿಂದಲೇ ಹೋರಾಟ ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಎಲ್ಲೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಕೆಲಸ ನಡೆಯುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಮಹದಾಯಿ, ಮೇಕೆದಾಟು ಸೇರಿ ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನ್ಯಾಯವಾಗಿದೆ. ನಮ್ಮ ಎಲ್ಲಾ ಬೇಡಿಕೆ ಈಡೇರಿಸಿದರೆ ನಾವು ಹೋರಾಟ ಮಾಡಲ್ಲ. ನೆಲ-ಜಲ-ಭಾಷೆ ವಿಚಾರವಾಗಿ ನಾವು ಹೋರಾಟ ನಡೆಸುತ್ತಿದ್ದೇವೆ ಎಂದರು.