ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಳ, ನೀರಾವರಿ ಯೋಜನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 27 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಬಗ್ಗೆ ಮಾತನಾಡಿ, ತಮಿಳುನಾಡು ಸರ್ಕಾರ ನದಿ ತಿರುವು ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಮಾರ್ಚ್ 5 ರೊಳಗೆ ಕಾವೇರಿ ನದಿ ತಿರುವು ಯೋಜನೆ ಕೈಬಿಡಲು ಗಡುವು ನೀಡಲಾಗಿದೆ. ಇದರ ಬಗ್ಗೆ ಚಕಾರ ಎತ್ತದ ರಾಜ್ಯದ ಸಂಸದರನ್ನು ಮೈಸೂರು ಬ್ಯಾಂಕ್ ಸರ್ಕಲ್ ಮಾರ್ಚ್ 6ರಂದು ಹರಾಜು ಹಾಕುವ ಪ್ರದರ್ಶನ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮಾರ್ಚ್ 13 ರಂದು ಕನ್ನಂಬಾಡಿಗೆ ಜಾಥಾ, ಮಾರ್ಚ್ 20 ರಂದು ಬೆಂಗಳೂರು ನಗರದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಮಹದಾಯಿ ಮೇಕೆದಾಟು ಯೋಜನೆಗಾಗಿ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಅಲ್ಲದೆ, ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅನಿಲ ದರ ಹೆಚ್ಚಳ ವಿರೋಧಿಸಿ ಹೋರಾಟ ಕೈಗೊಳ್ಳಲಾಗಿದೆ. ನಮ್ಮ ಹೋರಾಟಕ್ಕೆ ಹೋಟೆಲ್ ಸೇರಿದಂತೆ ಯಾರೂ ನೈತಿಕ ಬೆಂಬಲ ಕೊಡುವುದು ಬೇಡ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಧ್ವನಿಯೆತ್ತುತ್ತಿಲ್ಲ. ಕನ್ನಡಪರ ಸಂಘಟನೆಗಳು ಮಾತ್ರ ಧ್ವನಿ ಎತ್ತುತ್ತಿವೆ. ಸಿಎಂ ಯಡಿಯೂರಪ್ಪ ಸಂಸದರ ಸಭೆ ಕರೆಯಬೇಕಿತ್ತು. ಆದರೆ, ಬಿಜೆಪಿ ಮತಕ್ಕಾಗಿ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕೆಂದು ಅವರು ಆಗ್ರಹಿಸಿದ್ದಾರೆ.