ಮನೆ ಅಂದ ಕಾಣಬೇಕು ಅಂತಾ ಸಾಕಷ್ಟು ಕಲಾಕೃತಿಗಳನ್ನು ಇಡುತ್ತೇವೆ. ಇದು ಮನೆಯ ಅಂದವನ್ನು ಹೆಚ್ಚಿಸೋದಂತು ನಿಜ. ಆದರೆ ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಕಲಾಕೃತಿಗಳಿಗೂ ಅದರದ್ದೇ ಆದ ಸ್ಥಾನ ಹಾಗೂ ದಿಕ್ಕುಗಳಿವೆ. ಈ ದಿಕ್ಕಿನ ಲೆಕ್ಕಾಚಾರ ತಪ್ಪಿದಲ್ಲಿ ನಿಮಗೆ ಆಪತ್ತು ಆಗೋದಂತೂ ಗ್ಯಾರಂಟಿ..!
ಚೀನಾ ವಾಸ್ತು ಶಾಸ್ತ್ರದ ಪ್ರಕಾರ ಡ್ರ್ಯಾಗನ್ ಕಲಾಕೃತಿಯನ್ನು ಶಕ್ತಿಯ ಸಂಕೇತ ಎಂದು ನಂಬಲಾಗಿದೆ. ಅಲ್ಲದೇ ಈ ಕಲಾಕೃತಿಯು ಅದೃಷ್ಟವನ್ನು ತಂದುಕೊಡುತ್ತೆ ಎಂಬ ಮಾತು ಕೂಡ ಇದೆ. ಹೀಗಾಗಿ ಮನೆಯಲ್ಲಿ ಡ್ರ್ಯಾಗನ್ ಫೋಟೋ ಅಥವಾ ಮೂರ್ತಿಯನ್ನು ಇಡೋದು ಶುಭಕರ ಎಂಬ ನಂಬಿಕೆ ಇದೆ.
ಆದರೆ ಡ್ರ್ಯಾಗನ್ ಕಲಾಕೃತಿಯನ್ನು ಆಯ್ಕೆ ಮಾಡುವ ಮುನ್ನ ನೀವು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಡಲೇಬೇಕು. ನೀವು ಮರದಿಂದ, ಮಣ್ಣಿನಿಂದ ಮಾಡಿದ ಅಥವಾ ಸ್ಪಟಿಕದ ಡ್ರ್ಯಾಗನ್ಗಳನ್ನು ಖರೀದಿಸಿ ಮನೆಯಲ್ಲಿ ಇಡಬಹುದು.ಆದರೆ ಚಿನ್ನದಿಂದ ಮಾಡಿದ ಡ್ರ್ಯಾಗನ್ ಮೂರ್ತಿಯು ಶುಭಕರವಲ್ಲ.
ಮಣ್ಣಿನ ಹೂದಾನಿಯ ಮೇಲೆ ರಚಿಸುವ ಹಸಿರು ಬಣ್ಣದ ಡ್ರ್ಯಾಗನ್ಗಳು ಹೆಚ್ಚು ಶುಭದಾಯಕ ಎಂಬ ನಂಬಿಕೆ ಇದೆ. ಇದನ್ನು ನೀವು ಯಾರಿಗಾದರೂ ಉಡುಗೊರೆಯಾಗಿ ನೀಡಬಹುದು. ಇದನ್ನು ಹೊರತುಪಡಿಸಿ ಡ್ರ್ಯಾಗನ್ ಫೋಟೋವನ್ನು ನೀವು ಅಳವಡಿಸಬಹುದು. ಜೋಡಿ ಡ್ರ್ಯಾಗನ್ಗಳು ಇನ್ನೂ ಶುಭಕರ ಎಂಬ ನಂಬಿಕೆಯಿದೆ.
ಇದಿಷ್ಟು ಡ್ರ್ಯಾಗನ್ ಖರೀದಿ ಮಾತಾಯ್ತು. ಡ್ರ್ಯಾಗನ್ಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುವುದಕ್ಕೂ ನಿಯಮಗಳಿವೆ. ಡ್ರ್ಯಾಗನ್ಗಳನ್ನು ಎಂದಿಗೂ ಎತ್ತರದ ಸ್ಥಳಗಳಲ್ಲಿ ಅಥವಾ ಬೆಡ್ರೂಮ್ನಲ್ಲಿ ಇಡುವಂತಿಲ್ಲ. ಇದರಿಂದ ಮಾನಸಿಕ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಒಂದೊಂದು ಮಾದರಿಯ ಡ್ರ್ಯಾಗನ್ ಕಲಾಕೃತಿಗೆ ಒಂದೊಂದು ರೀತಿಯ ದಿಕ್ಕುಗಳಿವೆ.
ಮರದಿಂದ ನಿರ್ಮಿಸಲಾದ ಡ್ರ್ಯಾಗನ್ ಆಗ್ನೇಯ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಇರಿಸಬಹುದು. ಸ್ಪಟಿಕದ ಡ್ರ್ಯಾಗನ್ಗಳನ್ನು ಆಗ್ನೇಯ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬಹುದು. ಮಕ್ಕಳು ಓದುವ ಮೇಜಿನ ಮೇಲೂ ಡ್ರ್ಯಾಗನ್ ಇಡಬಹುದು. ಡ್ರ್ಯಾಗನ್ ಜೋಡಿಯನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಹೆಚ್ಚು ಸೂಕ್ತ.