ಆಹಾರ ಸೇವನೆ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಯಾವಾಗ ಆಹಾರ ಸೇವನೆ ಮಾಡಬೇಕು ಎಂಬುದಲ್ಲದೆ ಯಾವ ದಿಕ್ಕಿನಲ್ಲಿ ಮತ್ತು ಹೇಗೆ ಆಹಾರ ಸೇವನೆ ಮಾಡಿದ್ರೆ ಒಳ್ಳೆಯದು ಎನ್ನುವ ವಿವರ ವಾಸ್ತು ಶಾಸ್ತ್ರದಲ್ಲಿದೆ.
ವಾಸ್ತು ಪ್ರಕಾರ, ನಾವು ಆಹಾರ ಸೇವನೆ ಮಾಡುವ ದಿಕ್ಕು ನಮ್ಮ ಆರೋಗ್ಯ ಹಾಗೂ ಮನೆಯ ಸಂತೋಷ, ಸಂಪತ್ತಿಗೆ ಕಾರಣವಾಗುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕನ್ನು ಆಹಾರ ಸೇವನೆ ಮಾಡಲು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕನ್ನು ಅಶುಭ ಎಂದು ಪರಿಗಣಿಸಲಾಗಿದೆ. ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎನ್ನಲಾಗುತ್ತದೆ. ನೀವು ಈ ದಿಕ್ಕಿನಲ್ಲಿ ಕುಳಿತು ಆಹಾರ ಸೇವನೆ ಮಾಡಿದರೆ ಆಯಸ್ಸು ಕಡಿಮೆ ಆಗುತ್ತದೆ. ದುರಾದೃಷ್ಟ ನಿಮ್ಮದಾಗುತ್ತದೆ. ಪಶ್ಚಿಮ ದಿಕ್ಕನ್ನು ಕೂಡ ಆಹಾರ ಸೇವನೆಗೆ ಯೋಗ್ಯವಾದ ದಿಕ್ಕು ಎಂದು ಪರಿಗಣಿಸುವುದಿಲ್ಲ. ಇದು ಋಣಭಾರವನ್ನು ಹೆಚ್ಚಿಸುತ್ತದೆ.
ನೀವು ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಆಹಾರ ಸೇವನೆ ಮಾಡಬೇಕು. ಇದ್ರಿಂದ ಬಡತನ ದೂರವಾಗುತ್ತದೆ. ಈ ದಿಕ್ಕುಗಳಿಗೆ ಎದುರಾಗಿ ಆಹಾರವನ್ನು ಸೇವಿಸುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಊಟ ಮಾಡುವ ಸಮಯದಲ್ಲಿ ಚಪ್ಪಲಿ, ಬೂಟ್ ಧರಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡಬೇಡಿ. ನೀವು ಪ್ರತಿ ದಿನ ಸ್ನಾನ ಮಾಡಿ ಆಹಾರ ತಿಂದ್ರೆ ಲಕ್ಷ್ಮಿ ಒಲಿಯುತ್ತಾಳೆ. ಮುರಿದ ಅಥವಾ ಹಾಳಾದ ಪಾತ್ರೆಯನ್ನು ಆಹಾರ ತಿನ್ನಲು ಬಳಸಬೇಡಿ.