ಮನೆಯಲ್ಲಿರುವ ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಬಹಳ ಮುಖ್ಯ. ಮನೆಯ ವಸ್ತುಗಳು ವಾಸ್ತು ಪ್ರಕಾರ ಇರದೆ ಹೋದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂತೋಷ ಹಾಗೂ ಸಂಪತ್ತಿನ ಆಗಮನಕ್ಕೆ ಅಡ್ಡಿಯಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಚಪ್ಪಲಿಗೂ ಮಹತ್ವ ನೀಡಲಾಗಿದೆ. ಮನೆಯಲ್ಲಿರುವ ಚಪ್ಪಲಿ, ಶೂಗಳು ನಿಮ್ಮ ಜೀವನದ ಮೇಲೆ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಮನೆಯಲ್ಲಿರುವ ಶೂಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ತಲೆ ಕೆಳಗಾಗಿ ಇಡಬಾರದು. ಚಪ್ಪಲಿಯನ್ನು ತಲೆ ಕೆಳಗಾಗಿ ಇಟ್ಟರೆ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಮನೆಯಲ್ಲಿ ಸುಖ- ಶಾಂತಿ ನಾಶವಾಗುತ್ತದೆ. ಚಪ್ಪಲಿಯನ್ನು ತಲೆಕೆಳಗಾಗಿ ಇಟ್ಟರೆ ಆರ್ಥಿಕ ನಷ್ಟ ಕೂಡ ಉಂಟಾಗುತ್ತದೆ.
ಮನೆಗೆ ಬರ್ತಿದ್ದಂತೆ ಮನೆಯೊಳಗೆ ಹೋದ್ರೆ ಸಾಕಾಗಿರುತ್ತದೆ. ಹಾಗಾಗಿ ಚಪ್ಪಲಿಯನ್ನು ಎಲ್ಲೆಂದರಲ್ಲಿ ಎಸೆದು ಹೋಗ್ತೇವೆ. ಆದ್ರೆ ಇನ್ಮುಂದೆ ಚಪ್ಪಲಿ ಬಿಡುವ ಮೊದಲು ದಿಕ್ಕಿನ ಬಗ್ಗೆ ಗಮನ ನೀಡಿ. ಸರಿಯಾದ ಜಾಗದಲ್ಲಿ ಚಪ್ಪಲಿ ಬಿಡದೆ ಹೋದ್ರೆ ಬಡತನ ಆವರಿಸುತ್ತದೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಶೂ ಮತ್ತು ಚಪ್ಪಲಿಗಳನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬಿಡಬಾರದು. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಚಪ್ಪಲಿ ಮತ್ತು ಶೂ ಬಿಡುವುದ್ರಿಂದ ಮನೆಯ ಧನಾತ್ಮಕ ಶಕ್ತಿ ನಾಶವಾಗುತ್ತದೆ. ಈ ದಿಕ್ಕು ತಾಯಿ ಲಕ್ಷ್ಮಿ ದಿಕ್ಕಾಗಿದೆ. ಈ ದಿಕ್ಕಿನಲ್ಲಿ ಚಪ್ಪಲಿ ಬಿಟ್ಟರೆ ಲಕ್ಷ್ಮಿ ಮುನಿಸಿಕೊಳ್ತಾಳೆ ಎನ್ನಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಚಪ್ಪಲಿಯನ್ನು ಯಾವಾಗ್ಲೂ ಚಪ್ಪಲಿ ಸ್ಟ್ಯಾಂಡ್ ಮೇಲೆ ಇಡಬೇಕು. ಚಪ್ಪಲಿ ಸ್ಟ್ಯಾಂಡ್ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮಂಗಳಕರ ಲಾಭ ನಿಮಗಾಗುತ್ತದೆ.