ಬೆಂಗಳೂರು : ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ವರ್ತೂರು ಸಂತೋಷ್ ಕನ್ನಡದ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಇದ್ದ ಉಳಿದ ಸ್ಪರ್ಧಿಗಳಿಗೆ ಅಚ್ಚರಿ ಮತ್ತು ಸಂತೋಷ ಆಗಿದೆ.
ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ವರ್ತೂರು ಸಂತೋಷ್ ಗೆ ಕೆಲವು ದಿನಗಳ ಬಳಿಕ ಕೋರ್ಟ್ ಜಾಮೀನು ನೀಡಿತ್ತು. ಕಳೆದ ಶುಕ್ರವಾರ ಮಧ್ಯಾಹ್ನ ಸಂತೋಷ್ ಅವರಿಗೆ ಜಾಮೀನು ನೀಡಿದ ನ್ಯಾಯಾಲಯ, ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಸಂಜೆ 7:30 ರ ಸುಮಾರಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಹೊರಬಂದರು.
ಕಾರ್ಯಕ್ರಮ ಪ್ರಸಾರವಾದ ಎರಡು ವಾರಗಳ ನಂತರ, ಅರಣ್ಯ ಅಧಿಕಾರಿಗಳು ಬೆಂಗಳೂರಿನ ಹೊರವಲಯದಲ್ಲಿರುವ ಬಿಗ್ ಬಾಸ್ ಸೆಟ್ ಗೆ ಭೇಟಿ ನೀಡಿ ಹುಲಿ ಉಗುರು ಪೆಂಡೆಂಟ್ ಪ್ರದರ್ಶಿಸಿದ್ದಕ್ಕಾಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದರು. ವಿಚಾರಣೆಯ ನಂತರ, ಅವರನ್ನು ಅಕ್ಟೋಬರ್ 23 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
1972ರ ವನ್ಯಜೀವಿ ಕಾಯಿದೆ ವನ್ಯಜೀವಿ ಸಂಗ್ರಹ ಪ್ರದರ್ಶನ ನಿಷೇಧಿಸಿತ್ತು. ಬಳಿಕ 2006, 2012 ಹಾಗೂ 2022ರ ವನ್ಯಜೀವಿ ಕಾಯಿದೆ ಇನ್ನಷ್ಟು ಬಲಿಷ್ಠವಾಗಿವೆ.