ವಾರಣಾಸಿ: ಮದುಮಗಳ ಮನೆ ಸಿಗದೆ ರಾತ್ರಿಯೆಲ್ಲ ವರ ಮತ್ತು ಆತನ ಸಂಬಂಧಿಕರು ಹುಡುಕಾಡಿದ ಘಟನೆ ಉತ್ತರಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ನಡೆದಿದೆ.
ಕೊತ್ವಾಲಿ ಪಟ್ಟಣದ ಕಾನ್ಷಿರಾಮ್ ಕಾಲೋನಿ ನಿವಾಸಿಯಾಗಿರುವ ಯುವಕನ ಮದುವೆ ರಾಣಿಪುರದ ಯುವತಿಯೊಂದಿಗೆ ಡಿಸೆಂಬರ್ 11 ರಂದು ನಿಗದಿಯಾಗಿತ್ತು. ವರ ಮತ್ತು ಆತನ ಸಂಬಂಧಿಕರು ಡಿಸೆಂಬರ್ 10 ರಂದು ಸಂಜೆ ರಾಣಿಪುರಕ್ಕೆ ಬಂದಿದ್ದಾರೆ. ಆದರೆ, ಯುವತಿ ಮನೆಯ ವಿಳಾಸ ಸಿಗದೇ ರಾತ್ರಿಯೆಲ್ಲ ತಿರುಗಾಡಿ ಮಾರನೆ ದಿನ ಮದುವೆ ಸಂಬಂಧ ಕುದುರಿಸಿದ್ದ ದಲ್ಲಾಳಿ ಮಹಿಳೆಯನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ.
ಈ ವಿಚಾರ ಪೊಲೀಸರಿಗೆ ಗೊತ್ತಾಗಿ ವಿಚಾರಣೆ ನಡೆಸಲಾಗಿದೆ. ವರನಿಗೆ ಇದು ಎರಡನೇ ಮದುವೆಯಾಗಿದೆ. ಆತ ಈ ಮೊದಲೇ ಬಿಹಾರದ ಸಮಷ್ಠಿಪುರದ ಮಹಿಳೆಯನ್ನು ಮದುವೆಯಾಗಿ ಆಕೆಯಿಂದ ದೂರವಾಗಿದ್ದ. ರಾಣಿಪುರದ ಯುವತಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದು, ದಲ್ಲಾಳಿ ಮಹಿಳೆಯ ಮೂಲಕ ಮದುವೆ ನಿಗದಿಯಾಗಿತ್ತು. ವರನ ಕಡೆಯವರು ಮತ್ತು ವರ ಕೂಡ ಹುಡುಗಿಯನ್ನು ನೋಡಲು ಹೋಗಿರಲಿಲ್ಲ. ಮದುವೆ ಖರ್ಚಿಗಾಗಿ ಹಣ ನೀಡಲಾಗಿತ್ತು. ಮದುವೆ ಹಿಂದಿನ ದಿನ ಹುಡುಗಿ ಮನೆಗೆ ಬಂದರೆ ಮದುವೆ ಮನೆಯೇ ಸಿಕ್ಕಿಲ್ಲ. ಆಗ ದಲ್ಲಾಳಿ ಮಹಿಳೆಯನ್ನು ಪತ್ತೆ ಮಾಡಿ ವಿಚಾರಿಸಿದ್ದಾರೆ. ಬಳಿಕ ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಗಲಾಟೆ ಮಾಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.