ಇದು ಮನೆ ಜಗಳವೊಂದು ಬೀದಿಗೆ ಬಂದ ಪ್ರಕರಣ. ಮನೆಯಲ್ಲಿ ಸಾಕಷ್ಟು ಜಗಳವಾಡಿದ ಬಳಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ. ಆತನ ಪತ್ನಿ, ಅತ್ತೆ ಮತ್ತು ನಾದಿನಿ ನಿಂದಿಸಿ ಥಳಿಸಿದ್ದಾರೆ. ಮಂಗಳವಾರ ವಾರಣಾಸಿಯ ಫುಲ್‌ಪುರ ಪೊಲೀಸ್ ಠಾಣೆಯ ಸಮೀಪ ಈ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.
ಮಾಹಿತಿ ಪ್ರಕಾರ, ವೃತ್ತಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ಕಿಶನ್ ಎಂಬವರು ವಾರದ ಹಿಂದೆ ಪತ್ನಿಯೊಂದಿಗೆ ಜಗಳವಾಡಿದ್ದರು. ಅವರು ತಮ್ಮ ಪತ್ನಿ ಮಮತಾ ದೇವಿಯನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಹಲ್ಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡವನ್ನೂ ವಿಧಿಸಲಾಗಿದೆ.
ಮಂಗಳವಾರದಂದು ಇನ್ಸ್ ಪೆಕ್ಟರ್ ಅಜಯ್ ಯಾದವ್ ದಂಪತಿಯನ್ನು ಠಾಣೆಗೆ ಕರೆಸಿ ವಿವಾದ ಬಗೆಹರಿಸಿದ್ದರು. ಆದರೆ, ಕಿಶನ್ ಅವರ ಪತ್ನಿ ಮಮತಾ ದೇವಿ, ಅವರ ಸಹೋದರಿ ನೀತು ಮತ್ತು ತಾಯಿ ಪ್ರೇಮಶೀಲಾ ಜಗಳವಾಡುತ್ತಾ ಪೊಲೀಸ್ ಠಾಣೆ ಗೇಟ್ ಮುಂದೆಯೇ ಕಿಶನ್ ಗೆ ಚಪ್ಪಲಿಯಿಂದ ತೀವ್ರವಾಗಿ ಥಳಿಸಿದ್ದಾರೆ. ಪತಿ ದೂರಿನ ಮೇರೆಗೆ ಮೂವರು ಮಹಿಳೆಯರ ವಿರುದ್ಧ ಪೊಲೀಸರು ಹಲ್ಲೆ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
1 ನಿಮಿಷ 33 ಸೆಕೆಂಡ್ ಗಳ ವಿಡಿಯೋದಲ್ಲಿ, ಮಹಿಳೆಯರು ಕಿಶನ್ ಮೇಲೆ ರಸ್ತೆಯಲ್ಲಿ ಅಮಾನುಷವಾಗಿ ಥಳಿಸುವುದನ್ನು ನೋಡಬಹುದು. ಕೆಲವು ಸ್ಥಳೀಯರು ಮಧ್ಯಪ್ರವೇಶಿಸಿ ದೌರ್ಜನ್ಯಕ್ಕೊಳಗಾಗುತ್ತಿದ್ದವನನ್ನು ಮಹಿಳೆಯರ ಕೈಯಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದಾರೆ.