
ವಾರಣಾಸಿ: ತಾಂತ್ರಿಕ ದೋಷದ ಕಾರಣದಿಂದ ವಾರಣಾಸಿ –ಬೆಂಗಳೂರು ವಿಮಾನ ಸಂಚಾರವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿದ್ದು, ಉತ್ತರ ಪ್ರದೇಶದ ವಾರಣಾಸಿ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಅತಂತ್ರಕ್ಕೆ ಸಿಲುಕಿದ್ದಾರೆ.
ಮೈಸೂರು, ಬೆಂಗಳೂರು ಸೇರಿ ಹಲವು ಕಡೆಯಿಂದ ಪ್ರವಾಸಕ್ಕೆ ತೆರಳಿದ್ದವರು ತೊಂದರೆಗೆ ಒಳಗಾಗಿದ್ದಾರೆ. ಸಂಜೆ 6.05ಕ್ಕೆ ಹೊರಡಬೇಕಿದ್ದ ವಿಮಾನ ಕೊನೆ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ರದ್ದುಪಡಿಸಲಾಗಿದೆ.
ವಾರಣಾಸಿಯಲ್ಲಿ ಮೈಸೂರಿನ 20ಕ್ಕೂ ಹೆಚ್ಚು ಪ್ರಯಾಣಿಕರು ಅತಂತ್ರರಾಗಿದ್ದಾರೆ. ಅಕ್ಟೋಬರ್ 12 ರಂದು ಕನ್ನಡಿಗರು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದರು. ವಾರಣಾಸಿ ವಿಮಾನ ನಿಲ್ದಾಣದಲ್ಲಿ ಇರಲು ಸಿಬ್ಬಂದಿ ಅವಕಾಶ ನೀಡಿಲ್ಲ. ವಾರಣಾಸಿಯಲ್ಲಿ ನಾಳೆ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಏರ್ಪೋರ್ಟ್ ನಲ್ಲಿ ಇರಲು ಸಿಬ್ಬಂದಿ ಅವಕಾಶ ನೀಡಿಲ್ಲ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ತೊಂದರೆಗೆ ಒಳಗಾಗಿದ್ದಾರೆ.