ಸಿಂಹಾಚಲಂ: ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದ ಹುಂಡಿಗೆ ಭಕ್ತನೊಬ್ಬ ಬರೋಬ್ಬರಿ 100 ಕೋಟಿ ರೂಪಾಯಿ ಚೆಕ್ ಬರೆದು ಹಾಕಿದ್ದು, ದೇವಸ್ಥಾನದ ಹುಂಡಿ ಎಣಿಕೆ ವೇಳೆ ಪತ್ತೆಯಾದ ಚೆಕ್ ನೋಡಿ ಸಿಬಂದಿಗಳೇ ಅಚ್ಚರಿಗೊಳಗಾಗಿದ್ದಾರೆ.
ಪ್ರತಿ 15 ದಿನಗಳಿಗೊಮ್ಮೆ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಪ್ರತಿಬಾರಿಯಂತೆ ಈಬಾರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದ ವೇಳೆ ಅಪಾರ ಪ್ರಮಾಣದ ಕಾಣಿಕೆಯೊಂದು ಪತ್ತೆಯಾಗಿದೆ. ಒಂದೆರಡಲ್ಲ, ಬರೋಬ್ಬರಿ 100 ಕೋಟಿ ರೂಪಾಯಿ ಚೆಕ್ ಅದು…ಭಕ್ತರೊಬ್ಬರು 100 ಕೋಟಿ ರೂಪಾಯಿ ಚೆಕ್ ಬರೆದು ಹುಂಡಿಗೆ ಹಾಕಿದ್ದಾರೆ. ಅಚ್ಚರಿ, ಅನುಮಾನಗಳೊಂದಿಗೆ ಚೆಕ್ ಪರಿಶೀಲಿಸಿದ ಸಿಬ್ಬಂದಿಗಳು, ದೇವಸ್ಥಾನದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಚೆಕ್ ನಲ್ಲಿ ಮೊದಲು 10 ರೂಪಾಯಿ ಎಂದು ಬರೆದು ಮತ್ತೆ 100 ಕೋಟಿ ರೂಪಾಯಿ ಎಂದು ಬರೆದಿರುವುದು ಕಂಡುಬಂದಿದೆ. ತಮಾಷೆಗಾಗಿ ಈ ರೀತಿ ಮಾಡಿರಬಹುದೇ ಎಂದು ಯೋಚಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳಲು ಚೆಕ್ ಮೇಲಿನ ವಿವರಗಳ ಆಧಾರದ ಮೇಲೆ ಪರಿಶೀಲಿಸಿದ್ದಾರೆ. ಅದು ಬೊಡ್ಡೆಪಲ್ಲಿ ರಾಧಾಕೃಷ್ಣ ಅವರ ಉಳಿತಾಯ ಖಾತೆಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಉಳಿತಾಯದ ಖಾತೆಯಿಂದ 100 ಕೋಟಿ ರೂಪಾಯಿ ನೀಡಲು ಸಾಧ್ಯವೇ? ಎಂದು ಅನುಮಾನಿಸಿದ ಅಧಿಕಾರಿಗಳು ಬ್ಯಾಂಕ್ ಗೆ ಹೋಗಿ ತಿಳಿಸಿದ್ದಾರೆ. ಬ್ಯಾಂಕ್ ಖಾತೆ ಪರಿಶೀಲಿಸಿದರೆ ಅದರಲ್ಲಿರುವುದು ಕೇವಲ 17 ರೂಪಾಯಿ. ಆರಂಭದಲ್ಲಿ 100 ಕೋಟಿ ಚೆಕ್ ಕಂಡು ಅಚ್ಚರಿಗೊಳಗಾಗಿದ್ದ ಅಧಿಕಾರಿಗಳು ಬ್ಯಾಂಕ್ ಖಾತೆಯಲ್ಲಿರುವ ಹಣ ನೋಡಿ ಅಕ್ಷರಶಃ ಶಾಕ್ ಆಗಿದ್ದಾರೆ. ದೇವಸ್ಥಾನದ ಅಧಿಕಾರಿಗಳು ಚೆಕ್ ಹಿಂದಿನ ವ್ಯಕ್ತಿ ಪತ್ತೆಗೆ ಮುಂದಾಗಿದ್ದು, ತಮಾಷೆಗಾಗಿಯೂ ಈ ರೀತಿ ದುರ್ವರ್ತನೆ ಮಾಡಬಾರದು ಎಂದು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.