ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರದಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಸೇತುವೆಗಳು ಜಲಾವೃತಗೊಂಡಿವೆ. ಇಂತಹ ಸೇತುವೆ ಮೇಲೆ ವಾಹನ ಸವಾರರು ಜೀವದ ಹಂಗು ತೊರೆದು ಸಾಗುತ್ತಿದ್ದು, ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟದಿಂದಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ ವರದಾ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗಿದೆ. ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದ್ದು, ಐದು ಗ್ರಾಮಗಳ ಸಂಪರ್ಕವೇ ಕಡಿತಗೊಂಡಿದೆ.
ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿದ್ದರೂ ವಾಹನ ಸವಾರರು ಪ್ರಾಣಾಪಾಯವನ್ನೂ ಲೆಕ್ಕಿಸದೇ ನದಿ ನೀರಿನಲಿಯೇ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಕೆಲ ವಾಹನ ಸವಾರರು ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಹಿಮ್ಮುಖವಾಗಿ ವಾಹನ ಚಲಾಯಿಸಿ ಹುಚ್ಚಾಟ ಮೆರೆದಿದ್ದಾರೆ.