
ಬೆಂಗಳೂರು: ‘ರುದ್ರಿ’, ‘ಇನ್’ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಬಡಿಗೇರ್ ದೇವೇಂದ್ರ, ತಮ್ಮ ಮೂರನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈಬಾರಿ ನಿರ್ದೇಶಕರು ಕಾಡು-ನಾಡಿನ ಸಮರ-ಸಾಮರಸ್ಯಗಳ ಕಥಾ ಹಂದರವನ್ನು ವೀಕ್ಷಕರ ಮುಂದೆ ಅನಾವರಣಗೊಳಿಸುವ ಯತ್ನ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಕೂಡ ರಿಲೀಸ್ ಆಗಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.
ಬಡಿಗೇರ್ ದೇವೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರಕ್ಕೆ ‘ವನ್ಯಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ವನ್ಯಾ’ ಶೀರ್ಷಿಕೆಯೇ ವಿಶೇಷವಾಗಿದೆ. ಟೈಟಲ್ ಪೋಸ್ಟರ್ ಗಮನ ಸೆಳೆಯುತ್ತಿದ್ದು, ಪ್ರೇಕ್ಷಕರ ಕುತೂಹಲ ಇಮ್ಮಡಿಗೊಳಿಸುವಂತಿದೆ. ಈ ಚಿತ್ರವನ್ನು ಐಡಿಯಾ ವರ್ಕ್ಸ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಲ್ಲವಿ ಅನಂತ್ ನಿರ್ಮಿಸುತ್ತಿದ್ದಾರೆ.
’ವನ್ಯಾ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಬಡಿಗೇರ್ ದೇವೇಂದ್ರ, 2017 ರಲ್ಲಿ ಇಂಗ್ಲಿಷ್ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಲೇಖನ ಚಿತ್ರದ ಸ್ಕ್ರಿಪ್ಟ್ ಗೆ ಸ್ಫೂರ್ತಿ. ಸ್ನೇಹಿತ ಲತನ್ ನನಗೆ ಸ್ಕ್ರಿಪ್ಟ್ ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ.
ಕಾಡು ಮತ್ತು ನಾಡಿನ ದ್ವಂದ್ವ ಹಾಗೆಯೇ ಜೀವನದ ನಿಜವಾದ ಅರ್ಥಗಳನ್ನ ತೋರಿಸುವ ಉದ್ದೇಶದೊಂದಿಗೆ ಸೂಕ್ಷ್ಮವಾಗಿ ಹೆಣೆದಿರುವ ಕಥೆ ಇದಾಗಿದೆ…..’ವನ್ಯಾ’ ಚಿತ್ರ ಪ್ರೇಕ್ಷಕರ ಮನಮುಟ್ಟುವುದರಲ್ಲಿ ಅನುಮಾನವಿಲ್ಲ. ಕಾರಣ ಇಂದು ನಮ್ಮ ಸುತ್ತ-ಮುತ್ತಲು ನಡೆಯುತ್ತಿರುವ ಕಾಡು-ನಾಡಿನ ವಸ್ತು-ವಿಷಯವೇ ಕಥಾ ಹಂದರ. ಈ ಚಿತ್ರವನ್ನು ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಬೇಕೆಂಬುದು ನಮ್ಮ ಗುರಿ. ಆಧುನಿಕ ಜಗತ್ತಿನ ಭರಾಟೆ, ರಾಜಕೀಯ ಅಧಿಕಾರದಾಟಗಳಿಗೆ ಅರಣ್ಯ ಸಂಪತ್ತು ದಾಳವಾಗುತ್ತಿರುವ ಇಂದಿನ ದಿನಮಾನದಲ್ಲಿ ಕಾಡಿನ ಸಂರಕ್ಷಣೆಯೊಂದಿಗೆ ಮಾನವನ ಬದುಕು ಗಟ್ಟಿಗೊಳಿಸುವ ಅಗತ್ಯತೆಯನ್ನು ಸಾರುವ ಸಣ್ಣ ಪ್ರಯತ್ನ ಎಂದಿದ್ದಾರೆ.
‘ವನ್ಯಾ’ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕಾಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ನಡುವೆ ಬಾಲ ಕಲಾವಿದೆ ಧಾತ್ರಿ ಭಟ್ ಇದೇ ಮೊದಲ ಬಾರಿಗೆ ಬಣ್ಣಹಚ್ಚಿದ್ದು, ಬಿರಾದಾರ್ ಅವರ ಮೊಮ್ಮಗಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾಳೆ.
ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ವಿಜನಾಥ್ ಬಿರಾದಾರ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಮೇಘನಾ ಬೆಳವಾಡಿ ಬಿರಾದಾರ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಮೊಮ್ಮಗಳ ಪಾತ್ರದಲ್ಲಿ ಬಾಲನಟಿ ಧಾತ್ರಿ ಭಟ್ ಅಭಿನಯಿಸಿದ್ದಾಳೆ. ಇನ್ನು ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಅಶ್ವಿನ್ ಹಾಸನ್, ಶ್ರೀಕಾಂತ್, ಯಶವಂತ್ ಕುಚಬಾಳ್ ಮತ್ತು ಇತರರು ಅಭಿನಯಿಸಿದ್ದಾರೆ. ಶೀಘ್ರದಲ್ಲಿಯೇ ‘ವನ್ಯಾ’ ತೆರೆಗೆ ಬರಲಿದೆ.