ಬೆಳಗಾವಿ: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯ ಮನೆಗೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್, ಮನೆಯಲ್ಲಿದ್ದ ಅಜ್ಜಿಯಿಂದ ಮಾಹಿತಿ ಪಡೆದರು. ಬಳಿಕ ಪೊಲೀಸ್ ಆಯುಕ್ತರಿಂದಲೂ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಿನ್ನೆ ತಡರಾತ್ರಿ ಆರೋಪಿಗಳು ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಮನೆಯನ್ನು ಧ್ವಂಸಗೊಳಿಸಿದ್ದಾರೆ. ಇದೊಂದು ಅಮಾನವೀಯ ಹಾಗೂ ಖಂಡನೀಯವಾದ ಕೃತ್ಯ. ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಮಹಿಳೆ ಹಾಗೂ ಮನೆಯವರು ಈ ಘಟನೆಯನ್ನು ಹೇಗೆ ತಡೆದುಕೊಳ್ಳುತ್ತಾರೆ ಗೊತ್ತಿಲ್ಲ. ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದೆ. ಗ್ರಾಮದ ಗುಂಡಪ್ಪ ಎಂಬ 24 ವರ್ಷದ ರೈತ ಯುವಕ 18 ವರ್ಷದ ಪ್ರಿಯಾಂಕಾ ಎಂಬ ಯುವತಿಯನ್ನು ಪ್ರೀತಿಸಿ ಆಕೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಯುವತಿ ಮನೆಯವರು ಯುವಕನ ಮನೆಗೆ ನುಗ್ಗಿ ಗಲಾಟೆ ಮಾಡಿ ಈ ರೀತಿಯ ಅಮಾನವೀಯ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಬಗ್ಗೆಯೂ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.