ವಂದೇ ಭಾರತ್ ಎಕ್ಸ್‌ಪ್ರೆಸ್ ಢಿಕ್ಕಿ ಹೊಡೆದ ಪರಿಣಾಮ ಹಸುವೊಂದು ಗಾಳಿಯಲ್ಲಿ ಹಾರಿ ಹೋಗಿ ರೈಲ್ವೇ ಹಳಿಯ ಮೇಲೆ ಬಹಿರ್ದೆಸೆ ಮಾಡುತ್ತಿದ್ದ ನಿವೃತ್ತ ಉದ್ಯೋಗಿಯೊಬ್ಬರ ಮೇಲೆ ಬಿದ್ದ ಪರಿಣಾಮ ಇಬ್ಬರೂ ಮೃತಪಟ್ಟ ಘಟನೆ ರಾಜಸ್ಥಾನ ಅಲ್ವಾರ್ ಬಳಿ ಸಂಭವಿಸಿದೆ.
ಭಾರತೀಯ ರೈಲ್ವೇಯಲ್ಲಿ ಎಲೆಕ್ಟ್ರಿಷಿಯನ್ ಆಗಿ ನಿವೃತ್ತರಾಗಿರುವ ಶಿವದಯಾಳ್ ಶರ್ಮಾರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರೈಲ್ವೇ ಹಳಿಗಳ ಮೇಲೆ ಗೋವುಗಳು ಓಡಾಡುವ ಕಾರಣದಿಂದ ಸಂಭವಿಸುತ್ತಿರುವ ಅಫಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲೂ ಸೆಮಿ-ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಒಳಗೊಂಡ ಅಫಘಾತದ ಘಟನೆಗಳು ಹೆಚ್ಚುತ್ತಲೇ ಸಾಗಿವೆ.
ಮುಂಬಯಿ-ಗಾಂಧಿನಗರ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಸಹ ಅಕ್ಟೋಬರ್ 6ರಂದು ಹಸುವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಇದಾದ ಮಾರನೇ ದಿನವೂ ಸಹ ಆನಂದ್ ಬಳಿ ಹಸುವೊಂದಕ್ಕೆ ಢಿಕ್ಕಿ ಹೊಡೆದ ಬಳಿಕ ವಂದೇ ಭಾರತ್ ರೈಲಿನ ಮೂಗಿಗೆ ಹಾನಿಯಾಗಿತ್ತು. ಅಕ್ಟೋಬರ್ 29ರಂದು ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಮತ್ತೊಂದು ಹಸುವೊಂದರ ಮೇಲೆ ಹರಿದು ಹೋಗಿತ್ತು ಇದೇ ವಂದೇ ಭಾರತ್ ಎಕ್ಸ್‌ಪ್ರೆಸ್.
ಈ ಸರಣಿ ಅಫಘಾತಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ರೈಲ್ವೇ, ಮುಂಬಯಿ-ಅಹಮದಾಬಾದ್ ನಡುವಿನ 620ಕಿಮೀ ಉದ್ದಕ್ಕೂ ಲೋಹದ ಫೆನ್ಸಿಂಗ್ ಅಳವಡಿಸಲು ನಿರ್ಧರಿಸಿದೆ.